ಉದಯವಾಹಿನಿ, ಬೆಳಗಾವಿ: ಕಚೇರಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡಿದ್ರೆ RTO ಕಚೇರಿ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಆರ್‌ಟಿಓ ಕಚೇರಿಗಳಲ್ಲಿ ಶಿಸ್ತು ತರಲು ಅನೇಕ ಕ್ರಮವಹಿಸಲಾಗಿದೆ. ಕಚೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿ, ಸ್ವೀಕೃತಿಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಡ್ಡಾಯವಾಗಿ ವಿಷಯ ನಿರ್ವಾಹಕರು ನಿರ್ವಹಿಸುವುದು.
ಅಧೀಕ್ಷಕರು ಪ್ರತಿ ವಾರಕ್ಕೊಮ್ಮೆ ವಹಿಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ಮೇಜು ತಪಾಸಣೆಯನ್ನ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ ಎಂದರು. ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಯಾವುದೇ ರೀತಿಯ ಅವಕಾಶ ಕಲ್ಪಿಸದಂತೆ, ಒಂದು ವೇಳೆ ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಆಯಾ ಕಚೇರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!