
ಉದಯವಾಹಿನಿ, ಬೆಂಗಳೂರು : ಜನಸಾಮಾನ್ಯರು ಹೊಸ ವರ್ಷದ ಹೊಸ್ತಿಲಲ್ಲಿದ್ದು, 2026ರ ನೂತನ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಉಂಟಾಗುವ ಗಲಭೆಗಳು, ಯುವ ಸಮೂಹದ ಪುಂಡಾಟಿಕೆ, ಮಹಿಳೆಯರನ್ನು ಚುಡಾಯಿಸುವಂತಹ ಅಹಿತಕರ ಘಟನೆಗಳನ್ನು ತಪ್ಪಿಸಲು ಪಬ್, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿದ ಪೋಲೀಸ್ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಗೈಡ್‌ಲೈನ್ಸ್ ಜಾರಿ ಮಾಡಿದ್ದಾರೆ. ಬಿಬಿಎಂಪಿ ವತಿಯಿಂದಲೂ ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರು ಮಾಹಿತಿ ಹಂಚಿಕೊಂಡಿದ್ದು, ಗೈಡ್‌ಲೈನ್ಸ್ ರಿಲೀಸ್ ಮಾಡಿದ್ದಾರೆ.
ಮುಖ್ಯವಾಗಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಮಧ್ಯದ ಅಂಗಡಿಗಳಲ್ಲಿ ಗಲಭೆ ತಡೆಯಲು ಹಾಗೂ ಮಹಿಳೆಯವರ ವಿರುದ್ಧದ ಲೈಂಗಿಕ ಕಿರುಕುಳ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚಿಗೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹೊಸ ವರ್ಷದ ಆಚರಣೆ ಸಮಯದಲ್ಲಿ ಹೆಚ್ಚು ಅಪಾಯಗಳು ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಿ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶಿಸಲಾಗಿದೆ.
ಮಧ್ಯ ಮಾರಾಟ ಮಾಡುವ ಸ್ಥಳಗಳಲ್ಲಿ ಗಲಭೆಗಳು ಅಥವಾ ಯಾವುದೇ ಪುಂಡಾಟಿಕೆ ನಡೆದರೆ ಅದಕ್ಕೆ ರೆಸ್ಟೋರೆಂಟ್ ನೇರ ಹೊಣೆಯಾಗುತ್ತದೆ. ಎಲ್ಲಾ ಮಾಲ್‌ಗಳಲ್ಲಿ ಸಿಸಿ ಕ್ಯಾಮೆರಾಗಳು ಸರಿ ಇರುವಂತೆ ಅಲ್ಲಿನ ಸಿಬ್ಬಂದಿ ನೋಡಿಕೊಳ್ಳಬೇಕು. ಎಲ್ಲಾದರೂ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
