ಉದಯವಾಹಿನಿ, ಬೆಂಗಳೂರು, : ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜು (ಪ್ರಕ್ರಿಯೆ ಭರ್ಜರಿಯಾಗಿ ಸಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭಾರತೀಯ ಆಲ್‌ರೌಂಡರ್ ವೆಂಕಟೇಶ್ ಐಯ್ಯರ್ ಅವರನ್ನು 7 ಕೋಟಿ ರು.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸೀಸನ್‌ನಲ್ಲಿ ಕೆಕೆಆರ್ ಪರ ಆಡಿದ್ದ ವೆಂಕಟೇಶ್, ಈ ಬಾರಿ ಆರ್‌ಸಿಬಿ ಜೆರ್ಸಿ ತೊಟ್ಟು ಕಣಕ್ಕೆ ಇಳಿಯಲಿದ್ದಾರೆ. ಕಳೆದ ಆವೃತ್ತಿಯ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡ 23.75 ಕೋಟಿ ರು. ತೆತ್ತು ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿತ್ತು. ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ಅವರನ್ನು ಕೆಕೆಆರ್ ಹರಾಜಿಗೆ ಬಿಟ್ಟುಕೊಟ್ಟಿತ್ತು. ಈ ಬಾರಿ ಅವರ ಮೌಲ್ಯ 16.75 ಕೋಟಿ ರು. ಕಡಿಮೆಯಾಗಿದೆ.
ಕಳೆದ ಬಾರಿ 23.75 ರು.ಗೆ ಕೆಕೆಆರ್ ತಂಡದ ಪಾಲಾಗಿದ್ದ ವೆಂಕಟೇಶ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಅವರು ಟೂರ್ನಿಯಲ್ಲಿ ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್‌ಗಳನ್ನು ಕಲೆ ಹಾಕಿದ್ದರು. ವಿಶೇಷ ಎಂದರೆ ಕಳೆದ ಬಾರಿಯೂ ವೆಂಕಟೇಶ್ ಅಯ್ಯರ್ ಖರೀದಿಗೆ ಆರ್‌ಸಿಬಿ ಅಂತಿಮ ಹಂತದ ತನಕ ಬಿಡ್ ಮಾಡಿತ್ತು. ಆದರೆ ತನ್ನ ಬಳಿ ದೊಡ್ಡ ಮೊತ್ತ ಇಲ್ಲದ ಕಾರಣ ಹಿಂದೆ ಸರಿದಿತ್ತು. ಈ ಬಾರಿ ವೆಂಕಟೇಶ್ ಅಯ್ಯರ್ ಮೂಲ ಬೆಲೆ 2 ಕೋಟಿ ರು. ಆಗಿತ್ತು. ವೆಂಕಟೇಶ್ ಅಯ್ಯರ್ ಮಧ್ಯಮ ವೇಗದ ಬೌಲಿಂಗ್ ಮಾಡುವ ಕಾರಣ ಆರ್‌ಸಿಬಿಗೆ ಬ್ಯಾಟಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದೆ.
