ಉದಯವಾಹಿನಿ, ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮ ಒಣಗುವುದು, ಕಾಂತಿ ಕಡಿಮೆಯಾಗುವುದು ಹಾಗೂ ನಿರ್ಜೀವತೆ ಕಾಣಿಸಿಕೊಳ್ಳುವುದು ಸಾಮಾನ್ಯ. ತಣ್ಣನೆಯ ವಾತಾವರಣ ಚರ್ಮದ ತೇವಾಂಶವನ್ನು ಕಡಿಮೆ ಮಾಡಿ ಸ್ಕಿನ್ ಡ್ರೈ ಆಗಲು ಆರಂಭವಾಗುತ್ತದೆ. ಇಂತಹ ಸಮಯದಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಸವಾಲಾಗುತ್ತದೆ. ಈ ಸಂದರ್ಭದಲ್ಲಿ ದಿನನಿತ್ಯದ ಆಹಾರ ಮತ್ತು ಮನೆಯಲ್ಲಿಯೇ ತಯಾರಿಸಬಹುದಾದ ನೈಸರ್ಗಿಕ ಸೌಂದರ್ಯ ವರ್ಧಕಗಳಿಂದ ಚರ್ಮದ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಅಂತಹ ಪದಾರ್ಥಗಳಲ್ಲಿ ಬೀಟ್‌ರೂಟ್ ಕೂಡ ಒಂದಾಗಿದ್ದು, ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ತರಕಾರಿ ಚರ್ಮದ ಆರೈಕೆಗೆ ಬಹಳ ಪ್ರಯೋಜನಕಾರಿ. ದಿನಕ್ಕೆ ಒಂದು ಗ್ಲಾಸ್ ಬೀಟ್‌ರೂಟ್ ಜ್ಯೂಸ್ ಸೇವಿಸುವುದರಿಂದ ದೇಹದ ಒಳಗಿನಿಂದಲೇ ಚರ್ಮಕ್ಕೆ ಪೋಷಣೆ ದೊರೆಯುತ್ತದೆ.
ಬೀಟ್‌ರೂಟ್‌ನಲ್ಲಿ ಇರುವ ವಿಟಮಿನ್ ‘ಸಿ’ ಹಾಗೂ ಫೋಲೇಟ್ ಅಂಶಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಇದರ ಜತೆಗೆ ಬೀಟ್‌ರೂಟ್ ಬಳಸಿ ಮನೆಯಲ್ಲಿಯೇ ತಯಾರಿಸಬಹುದಾದ ನೈಸರ್ಗಿಕ ಕ್ರೀಂ ಕೂಡ ಚಳಿಗಾಲದಲ್ಲಿ ಚರ್ಮದ ತೇವಾಂಶವನ್ನು ಕಾಪಾಡಲು ಸಹಾಯಕ. ಬೀಟ್‌ರೂಟ್ ರಸ, ಅಲೋವೆರಾ ಜೆಲ್, ವಿಟಮಿನ್ ಇ, ಗ್ಲಿಸರಿನ್ ಮತ್ತು ಗುಲಾಬಿ ನೀರಿನ ಮಿಶ್ರಣದಿಂದ ತಯಾರಿಸಿದ ಈ ಕ್ರೀಂ ಚರ್ಮವನ್ನು ಮೃದುವಾಗಿಸಿ, ತಾಜಾತನ ಕಾಪಾಡುತ್ತದೆ.
ಬೀಟ್‌ರೂಟ್ ನಿಮ್ಮ ಮುಖಕ್ಕೆ ಹೊಳಪು ತಂದು ಕೊಡಲಿದ್ದು, ಅಡುಗೆಮನೆಗೆ ಮಾತ್ರ ಸೀಮಿತವಾಗಿರದೇ ಸೌಂದರ್ಯವರ್ಧಕವಾಗಿಯೂ ಸಹಕಾರಿ. ಇದರ ರಸವು ಚರ್ಮದ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡಲಿದ್ದು, ಅದು ಮುಖದಿಂದ ಕಲೆಗಳನ್ನು ನಿವಾರಿಸುತ್ತದೆ.ಬೀಟ್‌ರೂಟ್ ಕ್ರೀಮ್ ಅನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಆರೋಗ್ಯ ಹಾಗೂ ಟೋನ್ ಸುಧಾರಿಸಲಿದ್ದು, ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಅಲ್ಲದೇ ಬೀಟ್‌ರೂಟ್‌ನಲ್ಲಿ ವಿಟಮಿನ್ ‘ಸಿ’ ಅಂಶ ಹೇರಳವಾಗಿರುವುದರಿಂದ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.ಚರ್ಮದ ಮೇಲಿರುವ ವಿಷಕಾರಿ ಅಂಶವನ್ನು ನಿವಾರಿಸಲೂ ಬೀಟ್‌ರೂಟ್ ಉಪಯುಕ್ತ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ತ್ವಚೆಯನ್ನು ತೇವ ಹಾಗೂ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.
