ಉದಯವಾಹಿನಿ, ಬಿಸಿಲಿನ ದಾಹ ತಣಿಸಲೆಂಬಂತೆ, ಬೇಸಗೆಯಲ್ಲಿ ತರಹೇವಾರಿ ರಸಭರಿತ ಹಣ್ಣುಗಳು ಬರುತ್ತವೆ. ಕಲ್ಲಂಗಡಿ, ಕರಬೂಜದಿಂದ ಹಿಡಿದು, ಎಪ್ರಿಕಾಟ್‌, ನೆಕ್ಟರೀನ್‌ಗಳವರೆಗೆ ಹತ್ತು ಹಲವು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಅಂಥದ್ದೇ ಒಂದು ಹಣ್ಣು ಪೀಚ್ (Peach).‌ ಸಾಮಾನ್ಯವಾಗಿ ಪೀಚ್‌ ಎಂಬುದನ್ನು ಒಂದು ಬಣ್ಣವಾಗಿ ಬಲ್ಲವರೇ ಹೆಚ್ಚು, ಆ ಹಣ್ಣು ಸವಿದವರ ಸಂಖ್ಯೆ ಕಡಿಮೆಯೆ. ಉಷ್ಣವಲಯದ ಮೂಲ ಪ್ರಭೇದವಾಗಿರುವ ಈ ಹಣ್ಣನ್ನೀಗ ವಿಶ್ವದ ಹಲವು ದೇಶಗಳಲ್ಲಿ ಬೆಳೆಯಲಾಗುತ್ತದೆ.

ಈ ಹಣ್ಣಿನ ಹೆಸರು ‘ಪೀಚ್’ ಹೌದಾದರೂ, ಪೋಷಕಾಂಶಗಳಲ್ಲಿ ಇದೇನು ಪೀಚಲ್ಲ: ಸಾಕಷ್ಟು ದೊಡ್ಡ ದಾಸ್ತಾನನ್ನೇ ಹೊಂದಿದೆ. ಬೇಸಗೆಯ ದಾಹ ತಣಿಸಲೆಂದೇ ದೊರೆಯುವ ಸಿಹಿಯಾದ, ರಸಭರಿತವಾಗಿ ಈ ಹಣ್ಣನ್ನು ಆಗಾಗ ಮೆಲ್ಲುವುದು ಆರೋಗ್ಯಕ್ಕೂ ಹಿತಕರ. ಒಳಗೊಂದು ಸ್ವಲ್ಪ ದೊಡ್ಡ ಬೀಜ, ಸುತ್ತೆಲ್ಲ ತಿರುಳು ಹೊಂದಿರುವ ಈ ಹಣ್ಣಿನ ಮೇಲ್ಮಯಲ್ಲಿ ತುಪ್ಪಳದಂಥ ಸಣ್ಣ ರೋಮಗಳನ್ನು ಕಾಣಬಹುದು. ಸಿಹಿ ರುಚಿಯ, ರಸಭರಿತವಾದ ಈ ಹಣ್ಣು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ. ಹಲವು ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು, ನಾರು ಸೇರಿದಂತೆ ಹಲವು ರೀತಿಯಲ್ಲಿ ದೇಹಕ್ಕೆ ಪೋಷಣೆ ಒದಗಿಸಬಲ್ಲದು ಈ ಹಣ್ಣು. ಪೋಷಕಾಂಶಗಳ ಆಗರ: ಹಲವು ರೀತಿಯ ಜೀವಸತ್ವಗಳು ಪೀಚ್‌ ಹಣ್ಣಿನಲ್ಲಿವೆ. ಅದರಲ್ಲೂ ವಿಟಮಿನ್‌ ಸಿ ಹೇರಳವಾಗಿದ್ದು, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬಹಳಷ್ಟು ಬಗೆಯ ಉತ್ಕರ್ಷಣ ನಿರೋಧಕಗಳು ಇದರಲ್ಲಿವೆ. ಲೂಟಿನ್‌, ಬೀಟಾ ಕ್ಯಾರೊಟಿನ್‌ನಂಥ ಉತ್ಕರ್ಷಣ ನಿರೋಧಕಗಳು ಉರಿಯೂತ ಶಾಮಕಗಳಾಗಿ ಮಾತ್ರವೇ ಅಲ್ಲ, ಕಣ್ಣಿನ ಆರೋಗ್ಯ ರಕ್ಷಣೆಯಲ್ಲೂ ಪ್ರಧಾನ ಭೂಮಿಕೆ ವಹಿಸುತ್ತವೆ. ಬಹಳಷ್ಟು ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳು ಕೂಡ ಇದರಲ್ಲಿವೆ.

Leave a Reply

Your email address will not be published. Required fields are marked *

error: Content is protected !!