ಉದಯವಾಹಿನಿ:  ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಪಾಕಿಸ್ತಾನ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಬ್ಯಾಟ್ಸ್‌ಮನ್ ಸೌದ್ ಶಕೀಲ್ ಅವರು 361 ಎಸೆತಗಳಲ್ಲಿ 208 ರನ್ ಗಳಿಸಿ ಗೆಲುವಿನ ಮುನ್ನುಡಿ ಬರೆದರು.ಈ ಪ್ರದರ್ಶನದಲ್ಲಿ ಸೌದ್ ಶಕೀಲ್ ಅವರು 19 ಬೌಂಡರಿಗಳನ್ನು ಬಾರಿಸಿದರು.ಶ್ರೀಲಂಕಾ ನೆಲದಲ್ಲಿ ಯಾವುದೇ ಪಾಕಿಸ್ತಾನದ ಬ್ಯಾಟರ್ ದ್ವಿಶತಕ ಬಾರಿಸಿದ್ದು ಇದೇ ಮೊದಲಾಗಿದೆ.2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಚಕ್ರವನ್ನು ಅತ್ಯುತ್ತಮವಾಗಿ ಪ್ರಾರಂಭಿಸಲು ಈ ಗೆಲುವು ಪಾಕಿಸ್ತಾನ ತಂಡಕ್ಕೆ ದೊಡ್ಡ ಸಹಾಯ ಮಾಡಿದೆ. ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳೆರಡನ್ನೂ ಹಿಂದೆ ಹಾಕಿದೆ.ಶ್ರೀಲಂಕಾ ವಿರುದ್ಧದ ಅದ್ಭುತ ಗೆಲುವು ಪಾಕಿಸ್ತಾನ ತಂಡವನ್ನು ಇದೀಗ 12 ಅಂಕಗಳನ್ನು ಪಡೆದುಕೊಳ್ಳುವಂತೆ ಮಾಡಿದೆ ಮತ್ತು ಅವರ ಗೆಲುವಿನ ಶೇಕಡಾವಾರು 100 ರಷ್ಟಿದೆ. ಅಲ್ಲದೆ, ಪಾಕಿಸ್ತಾನ ತಂಡ ಎರಡನೇ ಸ್ಥಾನದಲ್ಲಿದೆ.ಇನ್ನು ಒಂದು ಟೆಸ್ಟ್ ಪಂದ್ಯದ ನಂತರ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಪಡೆದಿರುವ ಭಾರತ ಈಗಲೂ ನಂ.1 ಸ್ಥಾನದಲ್ಲಿದೆ.ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಅವರದೇ ನೆಲದಲ್ಲಿ ಇನ್ನಿಂಗ್ಸ್ ಮತ್ತು 141 ರನ್‌ಗಳಿಂದ ಸೋಲಿಸಿ ತಮ್ಮ ಪ್ರವಾಸವನ್ನು ಅತ್ಯುತ್ತಮವಾಗಿ ಪ್ರಾರಂಭಿಸಿತು. ಆದರೆ, ಪಾಕಿಸ್ತಾನ ತಂಡ ಅಷ್ಟೇ ಸಂಖ್ಯೆಯ ಅಂಕಗಳನ್ನು ಹೊಂದಿದ್ದರೂ ಸಹ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದ್ದು, ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್‌ಗೆ 288 ರನ್ ಗಳಿಸಿದೆ. ರೋಹಿತ್ ಶರ್ಮಾ 80 ರನ್, ಯಶಸ್ವ ಜೈಸ್ವಾಲ್ 57 ರನ್ ಮತ್ತು ವಿರಾಟ್ ಕೊಹ್ಲಿ ಅಜೇಯ 87 ರನ್ ಗಳಿಸಿದ್ದಾರೆ.ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ರೀತಿ ಆಡುವುದನ್ನು ಮುಂದುವರೆಸಿದರೆ ಮತ್ತು 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಚಕ್ರದ ಕೊನೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಉಳಿದರೆ, ಮೊದಲ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪರಸ್ಪರ ಆಡುವುದನ್ನು ನೋಡಬಹುದು.

Leave a Reply

Your email address will not be published. Required fields are marked *

error: Content is protected !!