ಉದಯವಾಹಿನಿ, ಬೆಂಗಳೂರು: ಶಕ್ತಿಸೌಧದ ವಿಧಾನಸೌಧದ ಮುಂದೆ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಡಾ.ನಾಗೇಂದ್ರ ಶಿರೂರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಲದೇವನಹಳ್ಳಿಯಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಬಯಲಿಗೆಳೆದಿದ್ದಕ್ಕೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ನಾಗೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.
ವಿಷ ಸೇವಿಸುವುದನ್ನು ಗಮನಿಸಿದ ವಿಧಾನಸೌಧ ಪೊಲೀಸರು ತಕ್ಷಣ ವಿಷದ ಬಾಟಲಿಯನ್ನು ಕಿತ್ತುಕೊಂಡು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ್ದು, ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಪುನೀತ್ ಕೆರೆಹಳ್ಳಿ ಜತೆ ಓಡಾಡುತ್ತಿದ್ದ ನಾಗೇಂದ್ರಪ್ಪ ಇತ್ತೀಚಿಗೆ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡಿದ್ದರು. ಇದೇ ವಿಚಾರಕ್ಕೆ ಪುನೀತ್ ಕೆರೆಹಳ್ಳಿ ಮತ್ತು ನಾಗೇಂದ್ರಪ್ಪ ಮೇಲೆ ಕೇಸ್ ದಾಖಲಾಗಿತ್ತು. ಪೊಲೀಸರು ನಾಗೇಂದ್ರಪ್ಪ ಹಿಂದೆ ಬಿದ್ದಿದ್ದರು. ಹೀಗಾಗಿ ವಿಧಾನಸೌಧದ ಬಳಿ ಆಗಮಿಸಿ ವಿಷ ಸೇವಿಸಿದರು ಎನ್ನಲಾಗಿದೆ. ಸದ್ಯ ನಾಗೇಂದ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
