ಉದಯವಾಹಿನಿ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ಚಿತ್ರ `ವೀರ ಕಂಬಳ’. ಕಂಬಳ ಎಂಬುದು ತುಳುನಾಡಿನ ನೆಲಮೂಲದ ಸಂಸ್ಕೃತಿಯ ಸೆಲೆಯಂಥಾ ಕ್ರೀಡೆ. ಅದಕ್ಕೆ ಎಂಟುನೂರು ವರ್ಷಗಳಿಗೂ ಹೆಚ್ಚಿನ ಸಮೃದ್ಧವಾದ ಇತಿಹಾಸವಿದೆ. ಕಾಲ ಕಳೆದಂತೆ ಒಂದಷ್ಟು ಕಾನೂನು ತೊಡಕುಗಳೆದುರಾಗುವ ಮೂಲಕ ಕಂಬಳ ಒಂದಷ್ಟು ರೂಪಾಂತರಗಳನ್ನು ಹೊಂದಿದೆ. ಅದರ ನಿಖರ ಇತಿಹಾಸದ ಜಾಡಿನಲ್ಲಿ ಹೆಜ್ಜೆಯಿಡುವ ಮೂಲಕ ರಾಜೇಂದ್ರ ಸಿಂಗ್ ಬಾಬು, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಈ ಚಿತ್ರವನ್ನು ರೂಪಿಸಿದ್ದಾರೆ. ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿರುವ ವೀರ ಕಂಬಳ ಚಿತ್ರವನ್ನು ಇದೇ ಫೆಬ್ರವರಿ ತಿಂಗಳಿನಲ್ಲಿ ತೆರೆಗಾಣಿಸಲು ಚಿತ್ರತಂಡ ನಿರ್ಧರಿಸಿದೆ.
ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ, ಚಿತ್ರಕಥೆ ಸಿದ್ಧಪಡಿಸಲು ನಿರ್ದೇಶಕರು ಎರಡು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಚಿತ್ರಕಥೆ ಮತ್ತು ಸಂಭಾಷಣೆಯ ಮೂಲಕ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ನಾಯಕನಾಗಿ ಸವಾಲಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನದಲ್ಲಿ ಯಾವುದೇ ತೊಡಕಿಲ್ಲದಂತೆ ವೀರ ಕಂಬಳವನ್ನು ಅಣಿಗೊಳಿಸಿರುವುದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.
