ಉದಯವಾಹಿನಿ : ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈಗ ಹೊಸದೊಂದು ಹೈಡ್ರಾಮಾ ಶುರುವಾಗಿದೆ. ಭದ್ರತೆಯ ಕಾರಣ ನೀಡಿ ಭಾರತದಲ್ಲಿ ಪಂದ್ಯಗಳನ್ನಾಡಲು ನಿರಾಕರಿಸಿದ್ದ ಬಾಂಗ್ಲಾದೇಶವನ್ನು ಈಗಾಗಲೇ ಟೂರ್ನಿಯಿಂದ ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಸ್ಕಾಟ್ಲಂಡ್ ತಂಡವನ್ನು ಸೇರಿಸಿಕೊಳ್ಳಲಾಗಿದೆ. ಆದರೆ, ಈಗ ಈ ಕಥೆಗೆ ಪಾಕಿಸ್ತಾನ ಹೊಸ ಟ್ವಿಸ್ಟ್ ನೀಡಲು ಮುಂದಾಗಿದೆ.
ಆಟಗಾರರ ಸುರಕ್ಷತೆಯ ನೆಪವೊಡ್ಡಿ ಭಾರತದಲ್ಲಿ ಆಡಲು ಒಪ್ಪದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಒತ್ತಾಯಿಸಿತ್ತು.
ಈ ಬೇಡಿಕೆಯನ್ನು ತಿರಸ್ಕರಿಸಿದ ಐಸಿಸಿ, ಭಾರತದಲ್ಲೇ ಆಡುವಂತೆ ಸೂಚಿಸಿತ್ತು. ಇದಕ್ಕೆ ಒಪ್ಪದ ಕಾರಣ ಬಾಂಗ್ಲಾದೇಶವನ್ನು ಟೂರ್ನಿಯಿಂದಲೇ ಹೊರಗಿಟ್ಟು, ಸ್ಕಾಟ್ಲಂಡ್ ತಂಡಕ್ಕೆ ಮಣೆ ಹಾಕಿತ್ತು.
ಈಗ ಬಾಂಗ್ಲಾದೇಶದ ಬೆಂಬಲಕ್ಕೆ ಪಾಕಿಸ್ತಾನ ನಿಂತಿದೆ. ಬಾಂಗ್ಲಾದೇಶವನ್ನು ಹೊರಗಿಟ್ಟಿರುವುದನ್ನು ಪ್ರತಿಭಟಿಸಿ ತಾನೂ ಕೂಡ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ನಿರ್ಧಾರಕ್ಕೆ ಪಾಕ್ ಮುಂದಾಗಿದೆ ಎನ್ನಲಾಗಿದೆ.
ಒಂದು ವೇಳೆ ಪಾಕಿಸ್ತಾನ ಟೂರ್ನಿಯಿಂದ ಹಿಂದೆ ಸರಿದರೆ, ಆ ಜಾಗವನ್ನು ತುಂಬಲು ಐಸಿಸಿ ಮತ್ತೆ ಬಾಂಗ್ಲಾದೇಶದ ಕಡೆಗೆ ನೋಡಲಿದೆ. ಕಾಕತಾಳೀಯವೆಂದರೆ, ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿಯಾಗಿವೆ. ಬಾಂಗ್ಲಾದೇಶಕ್ಕೆ ಬೇಕಿರುವುದೂ ಕೂಡ ಶ್ರೀಲಂಕಾದಲ್ಲೇ ಪಂದ್ಯಗಳು. ಹೀಗಾಗಿ ಪಾಕ್ ಹಿಂದೆ ಸರಿದರೆ, ಅದೇ ಜಾಗದಲ್ಲಿ ಬಾಂಗ್ಲಾದೇಶಕ್ಕೆ ಎಂಟ್ರಿ ನೀಡಲು ಐಸಿಸಿ ಚಿಂತನೆ ನಡೆಸಿದೆ. ಒಟ್ಟಿನಲ್ಲಿ, ರಾಜತಾಂತ್ರಿಕ ಮತ್ತು ಭದ್ರತೆಯ ಕಾರಣಗಳಿಂದಾಗಿ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಮೈದಾನದ ಹೊರಗೆ ದೊಡ್ಡ ಮಟ್ಟದ ಸಮರ ಶುರುವಾಗಿದೆ.

Leave a Reply

Your email address will not be published. Required fields are marked *

error: Content is protected !!