
ಉದಯವಾಹಿನಿ , ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವ ಹವ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೆ ದಿನದ ಮೊದಲ ಆಹಾರ ದೇಹಕ್ಕೆ ಪೋಷಕವಾಗಿರಬೇಕೇ ಹೊರತು ಹಾನಿಕಾರಕವಾಗಿರಬಾರದು ಎಂಬುದು ತಜ್ಞರ ಸಲಹೆಯಾಗಿದ್ದು, ಇದಕ್ಕಾಗಿ ನೈಸರ್ಗಿಕ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ದೇಹಕ್ಕೆ ಹೆಚ್ಚು ಲಾಭಕರ ಎನ್ನಲಾಗುತ್ತದೆ.
ಇಂದಿನ ಕೆಟ್ಟ ಆಹಾರ ಪದ್ಧತಿ, ಅನಿಯಮಿತ ಜೀವನಶೈಲಿ, ಅತಿಯಾದ ಜಂಕ್‌ಫುಡ್ ಸೇವನೆ ಇವುಗಳು ಆರೋಗ್ಯ ಹಾನಿಗೆ ಕಾರಣವಾಗುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಅನೇಕರು ಆಯುರ್ವೇದ ಪದ್ಧತಿ, ಗಿಡಮೂಲಿಕೆಗಳ ಬಳಕೆ ಮತ್ತು ನೈಸರ್ಗಿಕ ಮದ್ದುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅದರಲ್ಲಿ ಕರಿಬೇವು ಪ್ರಮುಖವಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳು ಅಥವಾ ನೆನೆಯಿಸಿದ ನೀರನ್ನು ಸೇವಿಸುವುದು ದೇಹಕ್ಕೆ ಹಲವು ರೀತಿಯ ಲಾಭಗಳು ದೊರೆಯಲಿವೆ.
ಕರಿಬೇವು ಎಲೆಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ನಿವಾರಣೆ ಆಗಲಿದ್ದು, ತೂಕ ಇಳಿಕೆಗೂ ಸಹಕಾರಿ ಆಗಲಿದೆ.
ಮುಂಜಾನೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳು ಅಥವಾ ಕರಿಬೇವು ನೀರನ್ನು ಸೇವಿಸುವುದು ಜೀರ್ಣಕೋಶಕ್ಕೆ ಅಪಾರ ಲಾಭ ಒದಗಿಸುತ್ತದೆ. ವಿಶೇಷವಾಗಿ ಹೊಟ್ಟೆಯಲ್ಲಿ ‘ಗುಡ್ ಬ್ಯಾಕ್ಟೀರಿಯಾ’ ಅಂದರೆ ಒಳ್ಳೆಯ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚುತ್ತದೆ.
ಈ ಬ್ಯಾಕ್ಟೀರಿಯಾಗಳು ಆಹಾರವನ್ನು ಬೇಗ ಜೀರ್ಣಿಸಲು ನೆರವಾಗುವುದರಿಂದ ಅಜೀರ್ಣ, ವಾಯು, ಅನಿಲ, ಹೊಟ್ಟೆ ಭಾರವಾಗಿರುವುದು ಮೊದಲಾದ ಸಮಸ್ಯೆಗಳು ಸಹಜವಾಗಿ ಕಡಿಮೆಯಾಗುತ್ತವೆ.
ದೇಹದಿಂದ ವಿಷಾಂಶ ಹೊರಹಾಕುವ ‘ನ್ಯಾಚುರಲ್ ಡಿಟಾಕ್ಸರ್’ ಕರಿಬೇವಿನ ಎಲೆಗಳಲ್ಲಿ ಶಕ್ತಿಯುತ ಆಂಟಿ–ಆಕ್ಸಿಡೆಂಟ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸೇರಿಕೊಂಡಿವೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ, ದೇಹದಲ್ಲಿ ಜಮೆಯಾಗಿರುವ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೊತೆಗೆ ಲಿವರ್ ಕಾರ್ಯಕ್ಷಮತೆಯನ್ನು ಸುಧಾರಿಸಿ ದೇಹ ಶುದ್ಧೀಕರಣ (detox) ಮಾಡುತ್ತದೆ.
