ಉದಯವಾಹಿನಿ, ಬೆಂಗಳೂರು: ವಿಧಾನಸೌಧದ ಸಚಿವರ ಕಚೇರಿ ಬಳಿ ಚಿನ್ನಾಭರಣ ಕಳ್ಳತನ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಭದ್ರತೆ ನಡುವೆಯೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಬರಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಮುಂದೆ ಮಾತನಾಡಿದ ಸಚಿವರು, ವಿಧಾನಸೌಧದಲ್ಲಿ ಚಿನ್ನ ಕಳವು ಸಂಬಂಧ ಸಿಸಿಟಿವಿ ಆಧರಿಸಿ ಡಿ ದರ್ಜೆ ನೌಕರನನ್ನು ಬಂಧಿಸಲಾಗಿದೆ. ವಿಧಾನಸೌಧದ ಗೇಟ್ನಿಂದ ಒಳಗೆ ಹೋಗಿದ್ದೇಗೆ? ಯಾವ ಗೇಟ್ನಿಂದ ಒಳಗೆ ಹೋಯ್ತು? ಅದರಲ್ಲಿಯೂ ಸಚಿವರ ಕಚೇರಿಗೆ ಬ್ಯಾಗ್ ಹೋಗುತ್ತೆ ಅಂದ್ರೆ ಪತ್ತೆ ಹಚ್ಚಬೇಕಲ್ವಾ? ಹೀಗಾಗಿ ತನಿಖೆಗೆ ಆದೇಶಿಸಲಾಗಿದ್ದು, ಇಂದು ಅಥವಾ ನಾಳೆ ವರದಿ ಕೈ ಸೇರಲಿದೆ. ಆ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಲೆ ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರಾಗಿಯೇ ಬಂದು ಸರೆಂಡರ್ ಆದರೆ ಒಳ್ಳೆಯದು. ಇಲ್ಲವಾದ್ರೆ ಪೊಲೀಸರು ಬಂಧಿಸಲು ಶೋಧ ನಡೆಸುತ್ತಾರೆ ಎಂದು ಹೇಳಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಅನುಮತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿವೃತ್ತ ನ್ಯಾ. ಕುನ್ಹಾ ಸಮಿತಿಯ ವರದಿಯಲ್ಲಿ ನೀಡಲಾಗಿದ್ದ ಶಿಫಾರಸುಗಳು ಅನುಷ್ಠಾನವಾಗಿದೆಯಾ ಎಂಬುದರ ಕುರಿತು ಪರಿಶೀಲಿಸಲಾಗುವುದು. ಇದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು. ಅಲ್ಪಾವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದರೆ ಮಾತ್ರ ಅನುಮತಿ ನೀಡುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಕಾಲ್ತುಳಿತದಲ್ಲಿ ಅಮಾನತು ಆಗಿದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ವಿಧಾನಸೌಧದಲ್ಲಿ ಚಿನ್ನ ಕಳ್ಳತನ: ವಿಧಾನಸೌಧದಲ್ಲಿನ ಸಚಿವರ ಕಚೇರಿ ಬಳಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ, ನಗರದ ನಿವಾಸಿ ನವೀನ್ ಎಂಬುವರು ನೀಡಿದ ದೂರು ಆಧರಿಸಿ ಆಡಳಿತ ಸುಧಾರಣಾ ಮತ್ತು ಸಿಬ್ಬಂದಿ ಇಲಾಖೆಯ ಡಿ ದರ್ಜೆ ನೌಕರ ಆಂಥೋನಿ ಎಂಬುವರನ್ನು ಪೊಲೀಸರು ಬಂಧಿಸಿದ್ಧರು. ಅವರಿಂದ 300 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಲಕ್ಷ ಹಣ ನಗದನ್ನು ವಶಕ್ಕೆ ಪಡೆದುಕೊಂಡಿದ್ದರು.
ಫೆಬ್ರುವರಿ 4ರಂದು ದೂರುದಾರ ಕೆಲಸ ನಿಮಿತ್ತ ವಿಧಾನಸೌಧದ 3ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದರು. ಭೇಟಿಗೆ ಸಚಿವರು ಸಿಗದ ಕಾರಣ ವಾಪಸ್ ಆಗಿದ್ದರು. ಈ ವೇಳೆ, ತೆಗೆದುಕೊಂಡು ಬಂದಿದ್ದ ಚೀಲವನ್ನು ಮರೆತುಹೋಗಿದ್ದರು. ಮಾರನೇ ದಿನ ವಿಧಾನಸೌಧಕ್ಕೆ ಬಂದು ನೋಡಿದಾಗ ಕೈ ಚೀಲ ಕಾಣೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ತಮಗೆ ಗೊತ್ತಿಲ್ಲ ಎಂದು ಕಚೇರಿ ಸಿಬ್ಬಂದಿ ಉತ್ತರಿಸಿದ್ದರು. ಚೀಲದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ನಗದಿರುವ ವಿಚಾರ ತಿಳಿಸಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದರು.
