
ಉದಯವಾಹಿನಿ ಯಾದಗಿರಿ: ಜಿಲ್ಲೆಯಲ್ಲಿ ಹಾದುಹೋಗಿರುವ ಪ್ರಮುಖ ಹೆದ್ದಾರಿಯಾದ ವಿಜಯಾಪುರ- ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಅರಕೇರಾ ಕೆ. ಬಳಿಯ ವೃತ್ತದ ಬಳಿ ರಸ್ತೆಯಲ್ಲಿ ಬೃಹತ್ ಆಕಾರದ ತಗ್ಗು ಗುಂಡಿಗಳು ಬಿದ್ದು, ಅಪಘಾತಕ್ಕೆ ಕೈಬೀಸಿ ಕರೆಯುತ್ತಿದೆ. ರಸ್ತೆಯ ಗುಂಡಿಯಲ್ಲಿ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ ಇದನ್ನು ತುರ್ತಾಗಿ ಸರಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದು, ತಪ್ಪಿದಲ್ಲಿ ಇದೇ ರಸ್ತೆಯ ಮೇಲೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಂತರ ಗ್ರಾಮಸ್ಥರೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಸುಮಾರು ದಿನಗಳಿಂದ ತಗ್ಗು ಗುಂಡಿಗಳು ಬಿದ್ದಿದ್ದರೂ ಯಾರೂ ಸಹ ಕಣ್ಣು ತೆರೆದು ನೋಡದೇ ಇರುವುದು ದುರದೃಷ್ಟಕರ ಸಂಗತಿ, ಈಗಾಗಲೇ ಸಾಕಷ್ಟು ವಾಹನ ಸವಾರರು, ದ್ವಿಚಕ್ರವಾಹನ ಸವಾರರು ರಾತ್ರಿ ವೇಳೆ ನೀರು ಇದ್ದುದರಿಂದ ರಸ್ತೆ ಗೊತ್ತಾಗದೇ ಮುಗ್ಗುರಿಸಿ ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ.
ಜಿಲ್ಲೆಯ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಪರಿಸ್ಥಿತಿ ಹೀಗಾದರೆ ಇನ್ನು ರಾಜ್ಯ, ಜಿಲ್ಲಾ ಹಾಗೂ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಲೂ ಆಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಥಳ ಪರಿಶೀಲಿಸಿ ಡಾಂಬರೀಕರಣ ಮಾಡಿ ಮಲೀನ ನೀರಿನ ಗುಂಡಿಗಳನ್ನು ಸರಿಪಡಿಸಿ ರಸ್ತೆಯನ್ನು ಡಾಂಬರೀಕರಣ ಮಾಡಿ ಅದರ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.ಸಂಬಂಧಪಟ್ಟ ಅಧಿಕಾರಿಗಳು ಅತಿ ಶೀಘ್ರದಲ್ಲೇ ಈ ರಸ್ತೆಯ ತಗ್ಗು ಗುಂಡಿಗಳನ್ನು ಸರಿಪಡಿಸದೇ ಇದ್ದರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದಿದ್ದರೆ ಇದೇ ಸ್ಥಳದಲ್ಲಿ ಕೈಯಲ್ಲಿ ಕೋಲು, ಪೊರಕೆ ಹಿಡಿದು ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ ಮುದ್ನಾಳ ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ಆಂಜಿನೇಯ ಬೆಳಗೇರಿ, ಚಾಂದಪಾಷಾ, ಕಾಶಪ್ಪ, ರಾಯಪ್ಪ, ನಿಂಗು, ಶರಣಪ್ಪ, ಮಲ್ಲಪ್ಪ, ಶಂಕರ, ಮಲ್ಲೇಶ, ಹಣಮಂತ, ಮರೆಪ್ಪ, ನಿಂಗಪ್ಪ, ಮಹೇಶ, ಮರಿಲಿಂಗ, ಮಲ್ಲಿಕಾರ್ಜುನ, ಜಗದೀಶ, ಶರಣಪ್ಪ, ಮಂಜನಾಥ, ಬಸವರಾಜ, ಸಂತೋಷ ಇನ್ನಿತರರು ಗ್ರಾಮಸ್ಥರು, ವಾಹನ ಸವಾರರು ಇದ್ದರು.
