
ಉದಯವಾಹಿನಿ ರಾಮನಗರ : ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ನನಗೆ ಕೆಲಸ ಮಾಡಲು ಶಾಲಾ ದಿನಗಳಲ್ಲಿ ಬಸವಣ್ಣ ನವರ ವಚನಗಳಿಂದ ಪಡೆದ ಸ್ಪೂರ್ತಿಯೇ ಕಾರಣ ಎಂದು ಕನ್ನಡ ಸಂಘಟಕ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ತಿಳಿಸಿದರು. ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಿಂಗಳ ಕಲಾಬೆಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಣ್ಣ ಜಗತ್ತಿನ ತುಂಬ ಸಂಚಲನ ಮಾಡಿದ ಸಾತ್ವಿಕಶಕ್ತಿ, ಬಸವಣ್ಣನ ವಚನಗಳ ಓದು ನಮಗೆ ಇಂದು ನೈತಿಕ ರೋಗ ನಿರೋಧಕ ಶಕ್ತಿಯಾಗಿದೆ. ಬಸವಣ್ಣ ಹನ್ನೆರಡನೇ ಶತಮಾನದವರು ಎಂದು ನಮಗೆ ಅನ್ನಿಸುವುದೇ ಇಲ್ಲ. ನಿತ್ಯ ಅವರು ನಮ್ಮನ್ನು ಕೈಡಿದು ನಡೆಸುತ್ತಾರೆ, ಆಪ್ತನಂತೆ. ಬಸವಣ್ಣ ಒಬ್ಬ ಕಾಲಾತೀತ, ದೇಶಾತೀತ ಜೀವನಮೌಲ್ಯ ಎಂದು ತಿಳಿಸಿದರು. ನಾನು ಮೂಲತಃ ಶಿಕ್ಷಕ, ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡೆ. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದ ಅವರು, ವಚನ ಸಾಹಿತ್ಯ ಪರಿಷತ್, ಗಮಕ ಸಾಹಿತ್ಯ ಪರಿಷತ್ ಅನ್ನು ಕಟ್ಟಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ವಚನಗಳನ್ನು ಜನಸಾಮನ್ಯರಿಗೆ ತಲುಪಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಜೀವನದಲ್ಲಿ ಸಮಯದ ಮಹತ್ವವನ್ನು ತಿಳಿದುಕೊಂಡರೆ ವೃತ್ತಿಯ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಕೆಲಸಗಳನ್ನು ಮಾಡಬಹುದು. ಈಗ ಸಂಘಟನೆಗೆ ಬೆಲೆ, ಎಲ್ಲರೂ ಹಣಕ್ಕೆ ಬೆಲೆ ಕೊಡುತ್ತಾರೆ, ಕಳೆದ ಮೂವತ್ತು ವರ್ಷಗಳ ಹಿಂದೆ ಹಣವಿಲ್ಲದೆ, ಜನರ ಸಹಕಾರ ಪಡೆದು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಿದ್ದೇವು. ಈಗ ರಾಜ್ಯ ಮಟ್ಟದ ಸಮ್ಮೇಳನ ಮಾಡಲು ಇಪ್ಪತ್ತು ಕೋಟಿಗೂ ಹೆಚ್ಚು ಹಣ ಬೇಕಾಗಿರುವುದು ದುರಾದೃಷ್ಟಕರ ಎಂದರು.ಲೇಖಕ ಸು.ಚಿ. ಗಂಗಾಧರಯ್ಯ ಮಾತನಾಡಿ, ಎಲ್ಲರೂ ಸಾಧಕರಾಗಲು ಸಾಧ್ಯವಿಲ್ಲ. ಎಲ್ಲೇಗೌಡ ಬೆಸಗರಹಳ್ಳಿ ಅವರಲ್ಲಿರುವ ಬದ್ಧತೆ ಅವರನ್ನು ಉನ್ನತ ಸ್ಥಾನಮಾನಕ್ಕೆ ತೆಗೆದುಕೊಂಡು ಹೋಗಿದೆ. ರಾಮನಗರದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಎಲ್ಲೇಗೌಡ ಬೆಸಗರಹಳ್ಳಿ ಅಂತಹವರ ಮಾರ್ಗದರ್ಶನ, ಸಲಹೆ ಇಂದಿನ ಯುವತಲೆಮಾರಿಗೆ ಬೇಕಾಗಿದೆ. ಈಗಲೂ ಅವರು ಸಾಹಿತ್ಯ ಪರಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸಾಹಿತಿ ತಾ.ಸಿ. ತಿಮ್ಮಯ್ಯ ಮಾತನಾಡಿ ವಚನಗಳನ್ನು ಜನಸಾಮನ್ಯರಿಗೆ ತಲುಪಿಸುವ ಕೆಲಸವನ್ನು ಎಲ್ಲೇಗೌಡ ಬೆಸಗರಹಳ್ಳಿ ಅವರು ಕಳೆದ ನಲವತ್ತು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ವಚನಗಳ ಆಶಯದಂತೆಯೇ ಜೀವನ ನಡೆಸುತ್ತಿದ್ದಾರೆ ಎಂದರು.ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ ಎಲ್ಲೇಗೌಡ ಬೆಸಗರಹಳ್ಳಿ ಅವರು ಶಿಕ್ಷಕರಾಗಿ, ಸಂಘಟಕರಾಗಿ, ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಐದು ಕೃತಿಗಳನ್ನು ರಚಿಸಿದ್ದಾರೆ. ರಾಮನಗರ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಮಹತ್ತರವಾದುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಸಂಘಟಕ ಎಲ್ಲೇಗೌಡ ಬೆಸಗರಹಳ್ಳಿ ಅವರಿಗೆ ‘ಶಾಂತಲಾ ಸಾಹಿತ್ಯ-ಸಾಂಸ್ಕೃತಿಕ ಪರಿಚಾರಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.ಸಾಹಿತಿಗಳಾದ ಸಾ.ಮ. ಶಿವಮಲ್ಲಯ್ಯ, ಕೂ.ಗಿ. ಗಿರಿಯಪ್ಪ, ಗಾಯಕಿ ಚಿತ್ರಾರಾವ್, ಶಿಕ್ಷಕರಾದ ರಾಜಶೇಖರ್, ನೇ.ರ. ಪ್ರಭಾಕರ್, ಗಾಯಕ ಮಹದೇವಯ್ಯ ಇದ್ದರು. ಗಾಯಕ ರೇಣುಕಪ್ಪ ಅವರು ವಚನ ಗಾಯನವನ್ನು ನಡೆಸಿಕೊಟ್ಟರು.
