
ಉದಯವಾಹಿನಿ, ಕುಶಾಲನಗರ: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘ, ರಾಷ್ಟ್ರೀಯ ಸೇವಾ ಯೋಜನೆ( ಎನ್.ಎಸ್.ಎಸ್) ವತಿಯಿಂದ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಇಸ್ರೋ ವತಿಯಿಂದ ಶನಿವಾರ ( ಸೆ.2 ರಂದು ) ಉಡಾಯಿಸಲಾದ ಆದಿತ್ಯ: ಎಲ್-1 ರ ನೌಕೆಯ ಉಡಾವಣೆಯ ನೇರ ದೃಶ್ಯವನ್ನು ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶ್ರೀ ಹರಿಕೋಟಾದ ಶ್ರೀ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2 ನೇ 2023 ರಂದು ಈ ನೌಕೆ ಉಡಾವಣೆ ಮಾಡಲಾದ ಕುರಿತು ಶಾಲೆಯಲ್ಲಿ ಮಕ್ಕಳಿಗೆ ನೇರ ಪ್ರಸಾರದ ಮೂಲಕ ಮಾಹಿತಿ ನೀಡಲಾಯಿತು. ಸೂರ್ಯನ ಮೇಲ್ಮೈ ಲಕ್ಷಣಗಳನ್ನು ಅಧ್ಯಯನ ಮಾಡಲು ಉಡಾವಣೆ ಮಾಡಲಾದ ಆದಿತ್ಯ ಎಲ್ – 1 ರ ಉದ್ದೇಶ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಸೂರ್ಯನ ಮೇಲ್ಮೈ ಮೇಲೆ ಅಧ್ಯಯನ ನಡೆಸಲು ಇದೇ ಮೊದಲ ಬಾರಿ ಭಾರತ ದೇಶವು ಈ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಯಶಸ್ವಿ ಉಡ್ಡಯನಕ್ಕೆ ಕಾರಣರಾದ ಇಸ್ರೊ ಸಂಸ್ಥೆಯ ಅಧ್ಯಕ್ಷ ಸೋಮನಾಥ್ ಹಾಗೂ ವಿಜ್ಞಾನಿಗಳ ಸಾಧನೆಯು ಭಾರತದ ಬಾಹ್ಯಾಕಾಶ ಸಂಸ್ಥೆಯ ಮೈಲಿಗಲ್ಲು ಆಗಿದೆ ಎಂದರು.
ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಕೆ.ಗೋಪಾಲಕೃಷ್ಣ, .ಎಂ.ಟಿ.ದಯಾನಂದ ಪ್ರಕಾಶ್, ಎಸ್.ಎಂ.ಗೀತಾ, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ವಿದ್ಯಾರ್ಥಿ ನಾಯಕಿ ಐಶ್ವರ್ಯ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಮಹತ್ವ ಹಾಗೂ ಉದ್ದೇಶ ಕುರಿತು ಮನವರಿಕೆ ಮಾಡಿಕೊಡಲಾಯಿತು.
