ಉದಯವಾಹಿನಿ, ಹೊಸಕೋಟೆ : ಸಂಘ ಸಂಸ್ಥೆಗಳು ಕೇವಲ ಲಾಭದ ಉದ್ದೇಶದಿಂದ ಕೆಲಸ ಮಾಡಬಾರದು ರೈತರಿಗೆ ಅನುಕೂಲವಾಗುವಂತೆ ಸೇವಾ ಮನೋಬಾವದಿಂದ ಕೆಲಸ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ನಗರದ ಖಾಸಗಿ ಸಭಾಭವನದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ೭೪ನೇ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ತಾಲೂಕು ನಗರ ಪ್ರದೇಶ ವ್ಯಾಪಕವಾಗಿ ಬೆಳೆದರೂ ಸಹ ಕೃಷಿ ಚಟುವಟಿಕೆಗಳಿಂದ ವಿಮುಖರಾಗದ ಹಿನ್ನೆಲೆ ಸಹಕಾರ ಸಂಘದಲ್ಲಿ ವಹಿವಾಟು ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ಶ್ಲಾಘನೀಯ. ಪ್ರಸಕ್ತ ಸಾಲಿನಲ್ಲಿ ೫೩ ಕೋಟಿ ವಹಿವಾಟು ನಡೆದಿದ್ದು, ೧ ಕೋಟಿ ಲಾಭಾಂಶ ಪಡೆದಿರುವುದು ಆಡಳಿತ ಮಂಡಳಿಯವರ ಶ್ರಮಕ್ಕೆ ಧಕ್ಕಿದ ಪ್ರತಿಫಲವಾಗಿದೆ. ಆದರೂ ಸಹ ಸಹಕಾರ ಸಂಘಗಳು ಎಚಿದರೆ ಲಾಭಾಂಶವನ್ನೆ ಗುರಿಯಾಗಿಟ್ಟುಕೊಳ್ಳಬಾರದು, ಬದಲಾಗಿ ರೈತರ ಪರವಾಗಿ ಸೌಲಭ್ಯ ಒದಗಿಸುವ ಕಾರ್ಯವೈಖರಿ ರೂಡಿಸಿಕೊಳ್ಳಬೇಕು. ಜನರ ಹತ್ತಿರಕ್ಕೆ ಹೋಗಿ ಸೌಲಭ್ಯ ತಲುಪಿಸಬೇಕು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ ಮಾತನಾಡಿ ತಾಲೂಕು ಸೊಸೈಟಿ ಸಾಕಷ್ಟು ಅಭಿವೃದ್ದಿಯತ್ತ ಸಾಗಬೇಕಾದರೆ ಈ ಹಿಂದೆ ಕರ್ತವ್ಯ ನಿರ್ವಹಣೆ ಮಾಡಿದ ಆಡಳಿತ ಮಂಡಳಿಯ ಶ್ರಮ ಹೆಚ್ಚಿದೆ. ಪ್ರಮುಖವಾಗಿ ಸಹಕಾರ ರತ್ನ ಪುರಸ್ಕೃತ ಕೋಡಿಹಳ್ಳಿ ಸೊಣ್ಣಪ್ಪ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯದ ಪರಿಣಾಮವಾಗಿ ಸಂಘಕ್ಕೆ ೧೦ ಲಕ್ಷ ಬಾಡಿಗೆ ಸಂಗ್ರಹ ಆಗಲು ಕಾರಣವಾಗಿದೆ ಎಂದು ತಿಳಿಸಿದರು.
