ಉದಯವಾಹಿನಿ, ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆಯುವ ನಾಲ್ಕನೇ ಟಿ20ಐ ಪಂದ್ಯದಲ್ಲಿ ಆಡಲು ಭಾರತ ತಂಡ ಸಜ್ಜಾಗುತ್ತಿದೆ. ಈಗಾಗಲೇ ಈ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಇನ್ನುಳಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೆ ಟಿ20ಐ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಇದರ ನಡುವೆ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿ ಯವರ ಮಹತ್ವದ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಡಿಸೆಂಬರ್ 17ರಂದು ಲಖನೌದಲ್ಲಿ ನಡೆಯಲಿರುವ ನಾಲ್ಕನೇ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಇನ್ನು 47 ರನ್ ಗಳಿಸಿದರೆ, ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್ ಕಲೆಹಾಕಿದ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಅಭಿಷೇಕ್ ಶರ್ಮಾ ಅವರು 2025ರಲ್ಲಿ 40 ಟಿ20 ಪಂದ್ಯಗಳನ್ನಾಡಿದ್ದು, 41.26ರ ಸರಾಸರಿಯಲ್ಲಿ 1,568 ರನ್ ಕಲೆಹಾಕಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳು ಒಳಗೊಂಡಿವೆ. ಈ ಹಿಂದೆ 2016ರಲ್ಲಿ ವಿರಾಟ್ ಕೊಹ್ಲಿಯವರು 31 ಟಿ20 ಪಂದ್ಯಗಳಲ್ಲಿ 89.66ರ ಸರಾಸರಿಯಲ್ಲಿ ನಾಲ್ಕು ಶತಕಗಳು ಮತ್ತು 14 ಅರ್ಧಶತಕಗಳು ಸೇರಿದಂತೆ ಒಟ್ಟು 1614 ರನ್ ಬಾರಿಸಿದ್ದರು. ಇದೀಗ ಅಭಿಷೇಕ್ ಶರ್ಮಾ ಅವರು ಈ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್ ಇಂಡಿಸ್ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರ ಹೆಸರಲ್ಲಿದೆ. 2024ರಲ್ಲಿ ಅವರು 76 ಪಂದ್ಯಗಳನ್ನಾಡಿ 2331 ರನ್‌ಗಳನ್ನು ಕಲೆಹಾಕಿದ್ದಾರೆ. ಈ ವರ್ಷ ಅಭಿಷೇಕ್ ಶರ್ಮಾ ಅವರಿಗೆ ಈ ದಾಖಲೆ ಮುರಿಯುವುದು ಅಸಾಧ್ಯವಾದರೂ, 2026ರ ಕ್ಯಾಲೆಂಡರ್ ವರ್ಷದಲ್ಲಿ ಅವರು ಇದೇ ಫಾರ್ಮ್ ಮುಂದುವರಿಸಿದರೆ ಪೂರನ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.
ಇದರ ನಡುವೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಬಳಿಕ ಮೂರನೇ ಪಂದ್ಯದಲ್ಲಿ 35 ರನ್ ಬಾರಿಸುವ ಮೂಲಕ ಲಯಕ್ಕೆ ಮರಳಿದ್ದಾರೆ ಎನ್ನಬಹುದು. ಆದಾಗ್ಯೂ, ಅವರು ಈ ಸರಣಿಯಲ್ಲಿ ಅವರು ಒಂದೇ ಒಂದು ಅರ್ಧಶತಕ ಬಾರಿಸಿಲ್ಲ.
