ಉದಯವಾಹಿನಿ, ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಇದುವರೆಗೆ ೫೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಸುಮಾರು ೩೦೦೦ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ರಾಜ್ಯಕ್ಕೆ ಸುಮಾರು ೧೦ ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಿಂದ ಉಂಟಾದ ನಷ್ಟವನ್ನು ಸರಿದೂಗಿಸಲು, ಜನರು ನಿರಂತರವಾಗಿ ವಿಪತ್ತು ಪರಿಹಾರ ನಿಧಿಗೆ ( ಹಿಮಾಚಲ ಸಿಎಂ ಪರಿಹಾರ ನಿಧಿ) ದೇಣಿಗೆ ನೀಡುತ್ತಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ನಂತರ ಇದೀಗ ಕಂಗನಾ ರಣಾವತ್ ಕೂಡ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ವಿಪತ್ತು ಪರಿಹಾರ ನಿಧಿಗೆ ಕಂಗನಾ ರಣಾವತ್ ಆನ್‌ಲೈನ್‌ನಲ್ಲಿ ೫ ಲಕ್ಷ ರೂ. ನೀಡಿದ್ದಾರೆ.
ಆದರೆ, ಹೆಚ್ಚಿನ ಹಣ ಪಾವತಿಸಲು ಬಯಸಿದ್ದರೂ, ಆನ್‌ಲೈನ್ ಪಾವತಿ ಮಾಡಲು ಸಾಧ್ಯವಾಗಲಿಲ್ಲ ಎಂದು ಕಂಗನಾ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ವಿಪತ್ತು ನಿಧಿಯನ್ನು ಸಹ ಅಲ್ಲಿನ ಹಿಮಾಚಲ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ರಣಾವತ್ ಹಿಮಾಚಲ ಸರ್ಕಾರದ ಕಾರ್ಯಚಟುವಟಿಕೆಗಳ ಕುರಿತು ಸಿಎ ಜೊತೆಗಿನ ಚಾಟ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದೇಣಿಗೆ ಮೊತ್ತದ ಸ್ವೀಕೃತಿಯನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
