ಉದಯವಾಹಿನಿ, ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ಚಾರ್ಮಾಡಿಯಲ್ಲಿ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ-ಚಾರ್ಮಾಡಿಥಾನಕ ಕಾಮಗಾರಿ ನಡೆಯುತ್ತಿದ್ದು, ಮುಂಡಾಜೆಯ ಸೋಮಂತಡ್ಕ ಪೇಟೆಯಲ್ಲಿ ಕೆಲ ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿದೆ. ಸೋಮಂತಡ್ಕ-ದಿಡುಪೆ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬ ಬಿದ್ದು ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಅಂಬಡ್ತ್ಯಾರು ಎಂಬಲ್ಲಿ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಸ್ಥಳದಲ್ಲಿದ್ದ ಕಾರ್ಮಿಕರು ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಮರ ಬಿದ್ದ ಪರಿಣಾಮ ಮುಂಡಾಜೆ-ಕಾಯರ್ತೋಡಿ ವಿದ್ಯುತ್ ತಂತಿ ತುಂಡಾಗಿದ್ದು, ನೂರಾರು ಮನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸೋಮಂತಡ್ಕ ಪಂಚಾಯತ್ ಬಳಿ ವಾಸವಾಗಿರುವ ಬಾಲಕೃಷ್ಣ ಪೂಜಾರಿ ಎಂಬುವರ ಮನೆಯ ಹದಿನೈದು ಶೀಟ್‌ಗಳು ಹಾರಿ ಹೋಗಿವೆ.
