ಉದಯವಾಹಿನಿ, ರಾಜಮಹೇಂದ್ರವರಂ(ಆಂಧ್ರ ಪ್ರದೇಶ): ಜಾತಿ ಬೇರೆಯಾಗಿರುವುದು ಮತ್ತು ತಮ್ಮ ಇಚ್ಛೆಗೆ ವಿರುದ್ಧವಾಗಿ ಸಹೋದರಿಯನ್ನು ಮದುವೆಯಾದನೆಂಬ ಕೋಪದಲ್ಲಿ ಸಹೋದರರು ವರನನ್ನು ಹತ್ಯೆ ಮಾಡಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ಮಂಡಪೇಟ್ ತಾಲೂಕಿನ ದ್ವಾರಪುಡಿಯ ವೇಮುಲಪಲ್ಲಿಯಲ್ಲಿ ನಡೆದಿದೆ. ವೀರವೆಂಕಟ ಸೂರ್ಯಪ್ರಕಾಶ ರಾವ್ ಹತ್ಯೆಯಾದ ವರ. ಚಂದ್ರಪಾಲ್ ಮತ್ತು ಗಿರಿಬಾಬು ಹತ್ಯೆ ಮಾಡಿದ ಸಹೋದರರು.
ಪೊಲೀಸರು ಪ್ರಕಾರ, ದ್ವಾರಪುಡಿಯ ಜವಳಿ ವ್ಯಾಪಾರಿ ಪೋಲಿಪಲ್ಲಿ ವೀರವೆಂಕಟ ಸೂರ್ಯಪ್ರಕಾಶ ರಾವ್ (41) ಮತ್ತು ಮೇದಪಾಡುವಿನ ಅಯಿನವಿಲ್ಲಿ ಸಂಧ್ಯಾ (40) ಪರಸ್ವರ ಪ್ರೀತಿಸುತ್ತಿದ್ದರು. ಸಂಧ್ಯಾ ಪ್ರಸ್ತುತ ರಾಯವರಂನಲ್ಲಿ ರಿಸರ್ವ್ ಡೆಪ್ಯೂಟಿ ತಹಶೀಲ್ದಾರ್ ಆಗಿದ್ದಾರೆ. ಸೂರ್ಯಪ್ರಕಾಶ ರಾವ್ ಅವರದ್ದು ಬೇರೆ ಜಾತಿಯಾಗಿರುವುದು ಮತ್ತು ಸಂಧ್ಯಾ ಸರ್ಕಾರಿ ಉದ್ಯೋಗದಲ್ಲಿರುವ ಕಾರಣ ಇದಕ್ಕಿಂತ ಒಳ್ಳೆ ಸಂಬಂಧ ತರುತ್ತೇವೆ, ಆತನನ್ನು ಮದುವೆಯಾಗಬೇಡ ಎಂದು ಸಹೋದರರಿಬ್ಬರು ಸಹೋದರಿಗೆ ಎಚ್ಚರಿಕೆ ನೀಡಿದ್ದರು.
ಆದರೂ, ಇಬ್ಬರೂ ಗುರುವಾರ ಅನ್ನವರಂ ಸತ್ಯದೇವ ದೇವಸ್ಥಾನದಲ್ಲಿ ವಿವಾಹವಾಗಿ ದ್ವಾರಪುಡಿಗೆ ಬಂದಿದ್ದರು. ಸಂಧ್ಯಾ ತಮ್ಮ ಮದುವೆ ಫೋಟೋಗಳನ್ನು ಫೈನಾನ್ಸ್ ವ್ಯಾಪಾರಿಯಾದ ತನ್ನ ಅಣ್ಣ ಚಂದ್ರಪಾಲ್‌ಗೆ ಕಳುಹಿಸಿದ್ದರು. ಆತ ಈ ವಿಷಯವನ್ನು ವಿಜಯನಗರದಲ್ಲಿರುವ ಫಾರ್ಮಸಿಸ್ಟ್ ಆಗಿರುವ ಸಹೋದರ ಗಿರಿಬಾಬುಗೆ ತಿಳಿಸಿದ್ದ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರಿಂದ ಕೋಪಗೊಂಡ ಸಹೋದರರು ಸೂರ್ಯಪ್ರಕಾಶ್ರಾವ್ನನ್ನು ಹತ್ಯೆ ಮಾಡಲು ಯೋಜಿಸಿದ್ದರು.
ಬಳಿಕ ಸಹೋದರರು ಗುರುವಾರ ರಾತ್ರಿ 11.30 ಗಂಟೆ ವೇಳೆ ದ್ವಾರಪುಡಿಯಲ್ಲಿರುವ ಸೂರ್ಯಪ್ರಕಾಶ್ ರಾವ್ ಅವರ ಮನೆಗೆ ತೆರಳಿದ್ದರು. ತಮ್ಮ ತಾಯಿ ಅಸ್ವಸ್ಥಳಾಗಿದ್ದಾರೆಂದು ಸಹೋದರಿ ಸಂಧ್ಯಾಗೆ ತಿಳಿಸಿ ಮನೆಯಿಂದ ಹೊರಗೆ ಬರುವಂತೆ ಮಾಡಿದ್ದಾರೆ. ಸಂಧ್ಯಾ ಜೊತೆಗೆ ಸೂರ್ಯಪ್ರಕಾಶ್ ರಾವ್ ಕೂಡ ಹೊರಗೆ ಬಂದಾಗ ಜಗಳ ತೆಗೆದಿದ್ದಾರೆ. ಗಲಾಟೆಯಲ್ಲಿ ಸೂರ್ಯಪ್ರಕಾಶ್ ಕೆಳಗೆ ಬಿದ್ದಾಗ, ಸಹೋದರರಿಬ್ಬರೂ ತಾವು ಈಗಾಗಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಕಲ್ಲಿನಿಂದ ತಲೆಗೆ ಐದಾರು ಬಾರಿ ಬಲವಾಗಿ ಹೊಡೆದಿದ್ದರಿಂದ ಸೂರ್ಯಪ್ರಕಾಶ್ ಮೃತಪಟ್ಟಿದ್ದಾರೆ.
ಅನಂತರ ಅಲ್ಲಿಂದ ಸಂಧ್ಯಾ ಅವರನ್ನು ಬಲವಂತವಾಗಿ ಕರೆದೊಯ್ಯುತ್ತಿದ್ದಾಗ ಮೃತನ ತಂದೆ ಸೂರ್ಯನಾರಾಯಣ ಕಿರುಚಿದ್ದು, ಸ್ಥಳೀಯರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೂರ್ವ ವಲಯ ಡಿಎಸ್ಪಿ ಬಿ. ವಿದ್ಯಾ ಮಧ್ಯರಾತ್ರಿ ಘಟನಾ ಸ್ಥಳ ಪರಿಶೀಲನೆ ನಡೆಸಿದರು.
