ಉದಯವಾಹಿನಿ ಪಾವಗಡ: ಇಲ್ಲಿನ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಭ್ರಷ್ಟಾಚಾರದ ಜೊತೆಗೆ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಬ್ ರಿಜಿಸ್ಟಾçರ್ ಕಛೇರಿಯಲ್ಲಿ ಜಮೀನು, ಮನೆ, ನಿವೇಶನ ಮುಂತಾದವುಗಳ ನೋಂದಣಿ ಮಾಡಿಸಲು ಸಾರ್ವಜನಿಕರು ಮಧ್ಯವರ್ತಿಗಳನ್ನೇ ಅವಲಂಬಿಸಬೇಕಾಗಿದೆ. ಮಧ್ಯವರ್ತಿಗಳಿಗೆ ಹಾಗೂ ಸಿಬ್ಬಂದಿಯವರಿಗೆ “ಕಛೇರಿಯು ಪ್ರತಿನಿತ್ಯ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ” ಸಂಜೆ ವೇಳೆ ಅಧಿಕಾರಿಗಳ ರಹಸ್ಯ ಲೆಕ್ಕಾಚಾರ ನಡೆಯುತ್ತದೆ ಎಂದು ಕಛೇರಿಗೆ ನೋಂದಣಿ ಮಾಡಿಸಲು ಬರುವ ಸಾರ್ವಜನಿಕರ ಮಾತಾಗಿದೆ.ಉಪನೋಂದಣಾಧಿಕಾರಿಗಳು, ಪತ್ರ ಬರಹಗಾರರು ಮತ್ತು ಮಧ್ಯವರ್ತಿಗಳು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ನಿವೇಶನ ನೋಂದಣಿ, ಜಮೀನು, ಆಸ್ತಿ ವಿಭಾಗ, ಆಸ್ತಿ ಖರೀದಿ ಸೇರಿದಂತೆ ಎಲ್ಲಾ ಬಗೆಯ ನೋಂದಣಿಗೆ ಇಂತಿಷ್ಟು ಲಂಚ ನೀಡಬೇಕಾಗಿದೆ, ಕೆಲ ಪತ್ರ ಬರಹಗಾರರು ಮತ್ತು ಮಧ್ಯವರ್ತಿಗಳನ್ನು ಆಸ್ತಿ ನೋಂದಣಿ ಮಾಡಿಸಿಕೊಡುವಂತೆ ಕೇಳಿದರೆ ಯಾವ ಯಾವ ಅಧಿಕಾರಿಗೆ ಎಷ್ಟು ನೀಡಬೇಕು ಸ್ಕ್ಯಾನಿಂಗ್, ಟೈಪಿಂಗ್, ನೋಂದಣಿ, ಮುದ್ರಣ ಶುಲ್ಕಗಳೆಷ್ಟು ಎನ್ನುವ ಪಟ್ಟಿ ನೀಡುತ್ತಾರೆ. ಒಬ್ಬೊಬ್ಬ ಪತ್ರ ಬರಹಗಾರ ಮತ್ತು ಮಧ್ಯವರ್ತಿಗಳು ಒಂದೊAದು ರೀತಿಯ ದರ ನಿಗದಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಹಣ ಇದ್ದವರು ಕೇಳಿದಷ್ಟು ಲಂಚ ನೀಡಿ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಆದರೆ ಹಣ ಇಲ್ಲದವರು, ರೈತರು ಲಂಚ ನೀಡಲು ಆಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ವ್ಯಾಪಕ ದೂರಾಗಿದೆ.ನೋಂದಣಿ ಮಾಡಿಸಲು ಅಧಿಕಾರಿಗಳನ್ನು ಕೇಳಿದರೆ ಅವರೇ ಮಧ್ಯವರ್ತಿಗಳ ಹೆಸರನ್ನು ಸೂಚಿಸಿ ಅವರ ಬಳಿಗೆ ಕಳುಹಿಸಿಕೊಡುತ್ತಾರೆ. ಲಂಚ ಕೊಡದಿದ್ದರೆ ಆಸ್ತಿಯ ದಾಖಲೆಗಳ ಕಡತ ಕೈಗೆ ತೆಗೆದುಕೊಳ್ಳುವುದೇ ಇಲ್ಲ ಎಂದು ಸಾರ್ವಜನಿಕರು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದಾರೆ.
ಕೆಲವು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವ ದ್ವೀತಿಯ ದರ್ಜೆ ಸಹಾಯಕರೊಬ್ಬರು ಸಬ್ ರಿಜಿಸ್ಟಾರ್ ಆಗಿ ಪ್ರಭಾರ ಅಧಿಕಾರ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು ಕಛೇರಿಯಲ್ಲಿ ಮಧ್ಯವರ್ತಿಗಳಿಲ್ಲದೇ ಯಾವುದೇ ಕೆಲಸಗಳು ಮಾಡುವುದಿಲ್ಲ. ದಿನಪೂರ್ತಿ ಕಛೇರಿಯಲ್ಲಿರದೇ ತಮಗೆ ಇಷ್ಟ ಬಂದ0ತೆ ಬಂದು ಹೋಗುವುದು ಕಂಡು ಬರುತ್ತಿದೆ. ಇದರಿಂದ ನೂರಾರು ರೈತರು, ಸಾರ್ವಜನಿಕರು ಇವರಿಗಾಗಿ ಬಾಗಿಲ ಬಳಿ ಕಾದು ಕುಳಿತಿರುವುದು ಸಾಮಾನ್ಯವಾಗಿದೆ. ಇನ್ನು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳದ್ದೇ ಕಾರುಬಾರು ಆಗಿದ್ದು ಅವರು ಆಡಿದ್ದೇ ಆಟವಾಗಿದೆ. ಅವರೇ ಅಧಿಕಾರಿಯಂತೆ ವರ್ತಿಸುತ್ತಿರುವುದರ ಜೊತೆಗೆ ಸಾರ್ವಜನಿಕರನ್ನು ಏರುಧ್ವನಿಯಲ್ಲಿ ಗದರಿಸುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಮುಂದಾದರೂ ಶಾಸಕರು, ಮೇಲಾಧಿಕಾರಿಗಳು ಗಮನ ಹರಿಸಿ ಕಛೇರಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಪರಿಶೀಲಿಸಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗುವರೇ? ಯಾವುದಕ್ಕೂ ತಾಲ್ಲೂಕಿನ ಜನತೆ ಕಾದು ನೋಡಬೇಕಾಗಿದೆ.
