
ಉದಯವಾಹಿನಿ ರಾಮನಗರ: ಬೆಂಗಳೂರಿನಿಂದ ಬೈರಮಂಗಲ ಜಲಾಶಯಕ್ಕೆ ಬರುತ್ತಿರುವ ನೀರನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಯೋಜನೆ ರೂಪಿಸಿದ್ದು ಇದರಿಂದ ಈ ನೀರನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ಬಿಡದಿ ಸುತ್ತಮುತ್ತಲಿನ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ದೋರಿದರು ನಗರದ ಜನಪದ ಲೋಕದ ಬಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾವರು, ವೃ಼ಭಾವತಿ ನದಿಯು ಬಿಡದಿ ಭಾಗದ ರೈತರಿಗೆ ಜೀವ ನದಿಯಾಗಿದೆ. ಕೆಲವು ವಿಚಾರದಲ್ಲಿ ಶಾಪಗ್ರಸ್ಥವಾಗಿದ್ದರೂ, ರೈತರ ಬೆಳೆಗಳಿಗೆ ಅನುಕೂಲವಾಗಿತ್ತು. ಆದರೆ ಸರ್ಕಾರ ಬೆಂಗಳೂರಿನ ನೀರನ್ನು 900 ಕೋಟಿ ವೆಚ್ಚದಲ್ಲಿ ಬೆಂಗಳೂರು ದಕ್ಷಿಣ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಲವು ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿದ್ದು, ಇದರಿಂದ ಬೈರಮಂಗಲ ಜಲಾಶಯದ ಆಸುಪಾಸಿನ ರೈತರಿಗೆ ಅನಾನುಕೂಲವಾಗಿದೆ ಎಂದು ಕಿಡಿ ಕಾರಿದರು.ಹಿಂದಿನ ಸರ್ಕಾರದ ಅವಧಿಯಲ್ಲಿ ಬೈರಮಂಗಲ ಜಲಾಶಯದ ಕಾಲುವೆಗಳಿಗೆ ಕಾಯಕಲ್ಪ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಈಗಿನ ಸರ್ಕಾರ ಬೈರಮಂಗಲ ಜಲಾಶಯದ ನೀರನ್ನು ಬೇರೆಡೆಗೆ ಹರಿಸಲು ಸಂಚು ನಡೆಸಿರುವುದು ಸರಿಯಲ್ಲ. ಕೂಡಲೆ ಈ ಯೋಜನೆಯನ್ನು ಕೈಬಿಡಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಒತ್ತಾಯಿಸಿದರು.ಸರ್ಕಾರ ಕೂಡಲೆ ಯೋಜನೆ ಕೈಬಿಡಲು ಕ್ರಮಕೈಗೊಳ್ಳದಿದ್ದರೆ ಬೈರಮಂಗಲ ಆಸುಪಾಸಿನ ರೈತರೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದು. ಈಗಾಗಲೆ ಬೈರಮಂಗಲ ಜಲಾಶಯದಲ್ಲಿ ಹೂಳು ತುಂಬಿದ್ದು ನೀರಿನ ಶೇಖರಣ ಪ್ರಮಾಣ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ನೀರು ಹರಿಯದಿದ್ದರೆ ಈ ಭಾಗದ ರೈತರ ಹೈನುಗಾರಿಕೆ, ರೇಷ್ಮೆ ವ್ಯವಸಾಯ, ತೆಂಗಿನ ಬೆಳೆಗೆ ತೀವ್ರ ಹಾನಿಯಾಗಲಿದೆ. ಇದು ಕೇವಲ ಬಿಡದಿ ಭಾಗದ ರೈತರಿಗೆ ಮಾತ್ರವಲ್ಲದೆ ವೃಷಭಾವತಿ ನದಿ ಹರಿಯುವ ಕನಕಪುರದವರೆಗಿನ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದರು.
ಜೆಡಿಎಸ್ – ಬಿಜೆಪಿ ಮೈತ್ರಯಿಂದ ರಾಜ್ಯದಲ್ಲಿ ಹೊಸ ಅಲೆ
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿಯಿಂದ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣಾ ಪ್ರಕ್ರಿಯೆ ಈಗಾಗಲೆ ಪ್ರಾರಂಭವಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಈಗಾಗಲೆ ಅಂತಿಮಗೊಂಡಿದ್ದು, ದೆಹಲಿ ಮಟ್ಟದಲ್ಲಿ ಲೋಕಸಭಾ ಸ್ಥಾನ ಹಂಚಿಕೆ ಬಗ್ಗೆ ಅಂತಿಮ ಮಾತುಕತೆ ಚಾಲ್ತಿಯಲ್ಲಿದೆ ಎಂದು ಹೇಳಿದರು.ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಜೆಡಿಎಸ್ ಪಕ್ಷದಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ವದಂತಿ. ಇದುವರೆಗೂ
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಂದಿಗೂ ರಕ್ಷಣೆ ನೀಡಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಯಾವ ರಕ್ಷಣಾ ಕ್ರಮ ತೆಗೆದುಕೊಳ್ಳಲಿಲ್ಲ.
ಯೋಗೇಶ್ವರ್ ಬಗ್ಗೆ ಶಾಸಕ ಎಚ್.ಸಿ.ಬಾಲಕೃಷ್ಣ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಯೋಗೇಶ್ವರ್ ಮಂತ್ರಿ ಮಗ ಅಲ್ಲ. ಇವರ ಬಗ್ಗೆ ಹಗುರವಾಗಿ ಮಾತನಾಡಿದರೆ ನನಗೆ ಸ್ಥಾನ ಸಿಗಬಹುದೆಂಬ ಭ್ರಮೆಯಲ್ಲಿ ಶಾಸಕ ಬಾಲಕೃಷ್ಣ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಇದು ಅವರಿಗೆ ಯಾವುದೆ ಸ್ಥಾನ ತಂದುಕೊಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಯೋಗೇಶ್ವರ್ ಅವರು ಸಂಸದ ಸ್ಥಾನಕ್ಕ ಸ್ಪರ್ಧೆ ಮಾಡುವ ಬಗ್ಗೆ ತಾಕತ್ತನ್ನು ಪ್ರಶ್ನೆ ಮಾಡಿರುವ ಬಾಲಕೃಷ್ಣ ಅವರು ತಮಗೆ ತಾಖತ್ತಿದ್ದರೆ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದ ಅವರು, ಚುನಾವಣೆಗೆ ಮುನ್ನ ಜನರಿಗೆ ಸ್ಮಾರ್ಟ್ ಕಾರ್ಡ್ ಆಸೆ ತೋರಿಸಿ, ಐದು ತಿಂಗಳಾದರೂ ಜನರಿಗೆ ಮುಖ ತೋರಿಸಲು ನಿಮ್ಮಿಂದ ಆಗುತ್ತಿಲ್ಲ. ನಾವು ಮಾಡಿರುವ ರಸ್ತೆಗಳಲ್ಲಿ ಗುಂಡಿ ಬಿದ್ದರಿರುವುದನ್ನು ಮೊದಲು ಮುಚ್ಚಿಸಲಿ ಎಂದು ಕಟುಕಿದರು.ರಾಮನಗರ ಮತ್ತು ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಕಾಂಗ್ರೆಸ್ ಗುತ್ತಿಗೆದಾರರಿಗೆ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಾರೆ. ರಾಜೀವ ಗಾಂಧಿ ಅರೋಗ್ಯ ವಿವಿಗೆ ಏಳು ತಿಂಗಳ ಹಿಂದೆ ಸಿಎಂ ಶಂಕುಸ್ಥಾಪನೆ ಮಾಡಿದ್ದರು. ಮತ್ತೆ ಇಲ್ಲಿನ ಶಾಸಕರು ಭೂಮಿ ಪೂಜೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು ಇಡಿ ದೇಶದಲ್ಲಿ ನರೇಗಾ ಕಾಮಗಾರಿಗಳ ಬಗ್ಗೆ ತನಿಖೆ ನಡೆದಿರುವುದು ಕನಕಪುರ ತಾಲ್ಲೂಕಿನಲ್ಲಿ ಎಂಬುದು ಜಗತ್ತಿಗೆ ಗೊತ್ತಿದೆ. ಇದು ಸಂಸದರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಜೆಡಿಎಸ್ ಮುಖಂಡರಾದ ಸೋಮೇಗೌಡ, ಬಿಡದಿ ಪುರಸಭಾ ಸದಸ್ಯ ದೇವರಾಜು, ಬಿಳಗುಂಬ ಗ್ರಾಪಂ ಮಾಜಿ ಸದಸ್ಯ ರಮೇಶ್, ಮುಖಂಡರಾದ ಗಂಗಶಿವ, ಜಯಕುಮಾರ್ ಮತ್ತಿತರರು ಸುದ್ಧಿಗೋಷ್ಠಿಯಲ್ಲಿದ್ದರು.
