
ಉದಯವಾಹಿನಿ ವಿಜಯಪುರ: ನಗರದಲ್ಲಿ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ 101 ಕೆಜಿ ಬೆಳ್ಳಿ ನಾಡದೇವಿ ಮೂರ್ತಿಯ ಭವ್ಯ ಮೆರವಣಿಗೆಗೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು,ನಮ್ಮೊಳಗಿರುವ ಕೆಟ್ಟ ಆಲೋಚನೆಗಳನ್ನು ದೂರಗೊಳಿಸಲು ಶಕ್ತಿಯ ಅಗತ್ಯವಿದೆ. ಇದೆ ಕಾರಣಕ್ಕೆ ದುರ್ಗೆಯನ್ನು ಪೂಜಿಸುತ್ತೇವೆ. ಆಕೆಯ ಕೈಯಲ್ಲಿರುವ ಆಯುಧಗಳು ನಮ್ಮ ಕೆಟ್ಟ ಆಲೋಚನೆಗಳನ್ನು ತೊಡೆದು ಹಾಕುವುದರ ಸಂಕೇತವಾಗಿದೆ. ಇನ್ನು ವಿದ್ಯೆ, ಬುದ್ಧಿಗಾಗಿ ಸರಸ್ವತಿಯನ್ನು ಪೂಜಿಸುತ್ತೇವೆ. ಪುಸ್ತಕಗಳನ್ನು ಓದುವುದಷ್ಟೆ ವಿದ್ಯೆಯಲ್ಲ. ಪ್ರತಿಯೊಂದರಲ್ಲಿಯು ಐಶ್ವರ್ಯ ಕಾಣಬೇಕು. ಪರಿಸರವೆ ನಮಗೆ ಐಶ್ವರ್ಯ. ಪರಿಸರ ಸಂರಕ್ಷಣೆಯಿಂದ ಮನುಷ್ಯನ ಬದುಕು ನೆಮ್ಮದಿಯಿಂದ ಇರಲು ಸಾಧ್ಯ, ನಮ್ಮೊಳಗಿನ ನಕಾರಾತ್ಮಕ ಆಲೋಚನೆಗಳನ್ನು ವಧೆ ಮಾಡಬೇಕು ಹಬ್ಬಗಳ ನೈಜ ಉದ್ದೇಶ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.ನಗರದ ರಾಮಮಂದಿರ ರಸ್ತೆಯಲ್ಲಿರುವ ನಾಡದೇವಿ ಮೂರ್ತಿ ಪ್ರತಿಷ್ಠಾಪನೆ ಸ್ಥಳದಿಂದ ಆರಂಭವಾದ ಈ ಮೆರವಣಿಗೆಯ ನೇತೃತ್ವವನ್ನು ಮಂಡಳಿಯ ಅಧ್ಯಕ್ಷ ಗುರು ಗಚ್ಚಿನಮಠ ವಹಿಸಿದ್ದರು.ನಂತರ ನಾನಾ ವಾದ್ಯಮೇಳದೊಂದಿಗೆ ಆರಂಭವಾದ ಮೆರವಣಿಗೆ ಶ್ರೀ ಸಿದ್ಧೇಶ್ವರ ಗುಡಿ, ಗಣಪತಿ ಚೌಕ, ಶಾಸ್ತ್ರಿ ಮಾರ್ಕೆಟ್, ಗಾಂಧಿ ಚೌಕ, ಸರಾಫ ಬಜಾರ್,ಮೂಲಕ ಸಂಚರಿಸಿ ಶ್ರೀ ರಾಮಂದಿರ ಹತ್ತಿರ ನಿರ್ಮಿಸಿರುವ ಭವ್ಯ ಮಂಟಪಕ್ಕೆ ಆಗಮಿಸಿತು.ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ದತ್ತಾತ್ರೇಯ ಹೊಸಮಠ ಸೇರಿದಂತೆ ನಗರದ ಗಣ್ಯ ವ್ಯಾಪಾರಸ್ಥರು, ಸಾಹಿತಿಗಳು, ನಾನಾ ಸಂಘ, ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
