
ಉದಯವಾಹಿನಿ ಇಂಡಿ : ಶಿಕ್ಷಕರು ಸಮಾಜದ ನ್ಯಾಯಾಧೀಶರು. ಅವರಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಅದನ್ನು ಶಿಕ್ಷಕರಾದವರು ಕಾಯ್ದುಕೊಂಡು ಹೋಗಬೇಕಾದ ಹೊಣೆಗಾರಿಕೆ ಹೊರಬೇಕು ಎಂದು ಪ್ರಾಧ್ಯಾಪಕ ರವಿಕುಮಾರ ಅರಳಿ ಹೇಳಿದರು. ಅವರು ಶುಕ್ರವಾರ ಇಂಡಿ ಪಟ್ಟಣದ ಕರ್ನಾಟಕ ಬಿ.ಈಡಿ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಇತ್ತೀಚೆಗೆ ಶಿಕ್ಷಕರಿಗೆ ನೀಡುವ ಗೌರವ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಇದಕ್ಕೆ ಇಂದಿನ ಶಿಕ್ಷಕರ ನಡವಳಿಕೆಯೇ ಕಾರಣ. ಆದ್ದರಿಂದ ಶಿಕ್ಷಕ ವೃತ್ತಿಯ ತರಬೇತಿ ಪಡೆಯುತ್ತಿರುವ ಬಿ.ಈಡಿ ಪ್ರಶಿಕ್ಷಣಾರ್ಥಿಗಳು ಈಗಿನಿಂದಲೇ ಶಿಕ್ಷಕ ವೃತ್ತಿಯ ಘನತೆ, ಗೌರವ, ಕಾರ್ಯ, ಜವಾಬ್ದಾರಿ, ನಡತೆ, ಹೊಣೆಗಾರಿಕೆ ಬಗ್ಗೆ ಅರಿಯಬೇಕೆಂದರು.ಪ್ರಶಿಕ್ಷಣಾರ್ಥಿಗಳು ತಮ್ಮ ತರಬೇತಿಯ ಅನುಭವ ಬಳಸಿಕೊಂಡು ಶಿಕ್ಷಕ ವೃತ್ತಿಯ ಜೊತೆಗೆ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡಾ ಎದುರಿಸಬೇಕು. ಕೆಎಎಸ್, ಐಎಎಸ್ ಮತ್ತು ಇನ್ನಿತರ ಸ್ಪರ್ಧಾತ್ಮಕ ಹುದ್ದೆಗಳಲ್ಲಿ ತೇರ್ಗಡೆಯಾದವರು ಬಹುತೇಕರು ಬಿ.ಇಡಿ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳು ಎಂದು ಹೇಳಿದ ಅವರು ಇದಕ್ಕೆ ಸತತ ಅಭ್ಯಾಸ ಮತ್ತು ವಿಶ್ವ, ದೇಶ, ರಾಜ್ಯದ ಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸಂಗಣ್ಣ ಈರಾಬಟಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ಸಾಹುಕಾರ ಕುಮಸಗಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಪ್ರಭುಲಿಂಗ ಕತ್ತಿ ಮಾತನಾಡಿದರು. ಪ್ರಾಚಾರ್ಯೆ ಡಾ. ಸುಧಾ ಸುಣಗಾರ ವಾರ್ಷಿಕ ವರದಿ ಮಂಡಿಸಿದರು. ಸಮಾರಂಭದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಶಿಕ್ಷಣಾರ್ಥಿ ರವಿ ಪೂಜಾರಿ ಪ್ರಾರ್ಥಿಸಿದರು. ಪ್ರಾಧ್ಯಾಪಕ ಬಿ.ಕೆ.ಉಕಮನಾಳ ಸ್ವಾಗತಿಸಿದರು. ಪ್ರಾಧ್ಯಾಪಕ ಡಿ.ಎಸ್.ಮಠಪತಿ ವಂದಿಸಿದರು
