ಉದಯವಾಹಿನಿ, ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವವರಿಗೂ ನಾನು ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ಬಿಜೆಪಿ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ವರಿಷ್ಠರಿಗೆ ಬಹಿರಂಗವಾಗಿಯೇ ಸಡ್ಡು ಹೊಡೆದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಉಕ ಭಾಗದವರಿಗೆ ನೀಡಬೇಕಿತ್ತು. ಪಕ್ಷದ ವರಿಷ್ಠರು ಈ ಭಾಗಕ್ಕೆ ಯಾವುದೇ ಪ್ರಾಶಸ್ತ್ಯ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ನಾನು ಯಾರಿಗೂ ಅಂಜುವವನ್ನಲ್ಲ. ಈ ಭಾಗಕ್ಕೆ ನ್ಯಾಯ ಸಿಗಬೇಕು ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಸಕಾಂಗ ಸಭೆಗೆ ನಾನು ಹಾಜ ರಾಗುವುದಿಲ್ಲ ಎಂದು ಸವಾಲು ಹಾಕಿದರು.ಈ ಭಾಗದಲ್ಲಿ ಅಧಿವೇಶನ ನಡೆಯುವ ವೇಳೆ ಉತ್ತರಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸುಮ್ಮನೆ ಬೇಕಾಬಿಟ್ಟಿ ಚರ್ಚೆ ನಡೆದರೆ ಅಧಿವೇಶನದ ಉದ್ದೇಶ ಈಡೇರುವುದಿಲ್ಲ. ನಾನು ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ಸ್ಪೀಕರ್ ಅವರಿಗೆ ಮನವಿ ಮಾಡುತ್ತೇನೆ. ಚರ್ಚೆಯನ್ನು ನಾನೇ ಮೊದಲು ಆರಂಭಿಸುತ್ತೇನೆ ಎಂದರು.
