ಉದಯವಾಹಿನಿ, ಬೆಳಗಾವಿ: ಅಧಿವೇಶನದಲ್ಲಿ ವಿರೋಧ ಪಕ್ಷಗಳು ಮಾಡುವ ಪ್ರಸ್ತಾಪಗಳಿಗೆ ಉತ್ತರ ನೀಡಲು ರಾಜ್ಯ ಸರ್ಕಾರ ತಯಾರಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಿದರೂ ಸೂಕ್ತ ಉತ್ತರ ನೀಡಲು ನಾವು ತಯಾರಾಗಿದ್ದೇವೆ ಎಂದರು.ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಕೆಲವು ಮಸೂದೆಗಳು ಮಂಡನೆಯಾಗಲಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯಾಗಲಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಎಲ್ಲ ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಲು ಜಾರಿಗೆ ತರಲಾಗಿದೆ. ಬಡವರ ಪರವಾಗಿ ತಂದಿರುವಂತಹ ಕಾರ್ಯಕ್ರಮಗಳು ಎಂದು ಸಮರ್ಥಿಸಿಕೊಂಡರು. ತೆಲಂಗಾಣದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಯಿಂದ ಕಾಂಗ್ರೆಸ್‍ಗೆ ಗೆಲುವು ಸಿಕ್ಕಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಗ್ಯಾರಂಟಿ ಭರವಸೆ ಘೋಷಣೆ ಮಾಡಿರಲಿಲ್ಲವೇ? ಹಾಗಿದ್ದರೆ ಅವರು ಯಾವ ಭರವಸೆ ಮೇಲೆ ಗೆದ್ದಿದ್ದಾರೆ ಎಂದು ಪ್ರಶ್ನಿಸಿದರು.
