ಉದಯವಾಹಿನಿ, ವಿಜಯಪುರ : ಖಾಸಗಿ ಬಸ್ ಟೈರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡು ಬಸ್ ಸುಟ್ಟು ಕರಕಲಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಹಿಟ್ನಳ್ಳಿ ಬಳಿ ಎನ್.ಎಚ್. ೫೦ರಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಜನತಾ ಟ್ರಾವೆಲ್ಸ್ ಗೆ ಸೇರಿದ ಬಸ್ ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ವೇಳೆ ಬಸ್ ಟೈರ್ ಬ್ಲಾಸ್ಟ್ ಆಗಿ ಈ ಅವಘಡ ನಡೆದಿದೆ.
ಟೈರ್ ಬ್ಲಾಸ್ಟ್ ಆಗುತ್ತಿದ್ದಂತೆ ಪ್ರಯಾಣಿಕರು ಎಲ್ಲರೂ ಕೆಳಗಿಳಿದಿದ್ದಾರೆ. ಕ್ಷಣಾರ್ಧದಲ್ಲಿ ಇದೇ ವೇಳೆ ಬಸ್ ಗೆ ಬೆಂಕಿ ಹೊತ್ತಿಕೊಂಡು ನೋಡು ನೋಡುತ್ತಿದ್ದಂತೆ ಧಗಧಗನೇ ಉರಿದು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ.
ಕ್ಷಣ ಮಾತ್ರದಲ್ಲಿ ಇಡೀ ಬಸ್ ಗೆ ಬೆಂಕಿ ವ್ಯಾಪಿಸಿದ ಪರಿಣಾಮ ಪ್ರಯಾಣಿಕರ ಲಗೇಜ್ ಬೆಂಕಿಗಾಹುತಿಯಾಗಿವೆ.
ಬೆಲೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆ ಭಸ್ಮವಾಗಿವೆ.ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು, ಅಗ್ನಿ ಶಾಮಕದಳ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
