ಉದಯವಾಹಿನಿ, ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಕಾರವಾರದಲ್ಲಿ ತೀವ್ರ ಚಳಿ ಅಲೆ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 20 ಮತ್ತು 21 ರಂದು ತೀವ್ರ ಚಳಿ ಇರುವ ಎಚ್ಚರಿಕೆ ಹವಾಮಾನ ಇಲಾಖೆ ಎಚ್ಚರಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿಯಂತೆ, ಡಿಸೆಂಬರ್ 20 ಹಾಗೂ 21ರಂದು ಕಾರವಾರ ಸೇರಿದಂತೆ ಕರಾವಳಿ ಕರ್ನಾಟಕದ ಕೆಲ ಭಾಗಗಳಲ್ಲಿ ತೀವ್ರ ಚಳಿ ಅಲೆ ಅನುಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಕನಿಷ್ಠ ತಾಪಮಾನದಲ್ಲಿ ಗಣನೀಯ ಇಳಿಕೆ ಸಂಭವಿಸುವ ನಿರೀಕ್ಷೆ ಇದ್ದು ಕಾರವಾರ ಹಾಗೂ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ 2–3 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ತೀವ್ರ ಚಳಿ ಹೆಚ್ಚಾಗುವ ಸಾಧ್ಯತೆ ಇದ್ದು ಒಳನಾಡು ಕರ್ನಾಟಕದ ಕೆಲ ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 4–6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಮುನ್ಸೂಚನೆ ಇದೆ. ಚಳಿ ಗಾಳಿಯ ಸಂದರ್ಭದಲ್ಲಿ ಮಕ್ಕಳು, ವೃದ್ಧರು ಮತ್ತು ಆರೋಗ್ಯ ಸಮಸ್ಯೆಯಿರುವವರು ಚಳಿಯಿಂದ ಎಚ್ಚರಿಕೆ ವಹಿಸಬೇಕು, ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಬೆಚ್ಚಗಿನ ಉಡುಪು ಧರಿಸುವುದು ಅಗತ್ಯ, ಚಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿಲು ಸೂಚುಸಲಾಗಿದೆ. ಈ ಚಳಿ ಅಲೆ ಪ್ರಭಾವವು ಡಿಸೆಂಬರ್ 22ರವರೆಗೂ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
