ಉದಯವಾಹಿನಿ, ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು ಐದು ಸಾವಿರ ರೂ. ಹೆಚ್ಚಳ ಮಾಡಲು 60 ವರ್ಷ ತುಂಬಿದವರಿಗೆ ಇಡುಗಂಟ್ಟು ನೀಡಲು ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಗೌರವಧನವನ್ನು ಗರಿಷ್ಠ 32 ಸಾವಿರ ರೂ.ಗೆ ಗರಿಷ್ಠ 5 ಸಾವಿರ ರೂ. ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ 55 ಕೋಟಿ ರೂ. ವರ್ಷಕ್ಕೆ ಹೊರೆಯಾಗಲಿದೆ ಎಂದರು.
ವರ್ಷಕ್ಕೆ 50 ಸಾವಿರ ರೂ.ನಂತೆ 10 ವರ್ಷಕ್ಕೆ ಗರಿಷ್ಠ 5 ಲಕ್ಷ ರೂ. ಕೊಡೋಕೆ ತೀರ್ಮಾನ ಮಾಡಿದ್ದೇವೆ. 60 ವರ್ಷ ಪೂರೈಸಿದವರಿಗೆ ಮಾತ್ರ ನಾವು ಇಡುಗಂಟು ಕೊಡೋದು, ಮಧ್ಯದಲ್ಲಿ ಬಿಟ್ಟವರಿಗೆ ಸಿಗುವುದಿಲ್ಲ.ಆರೋಗ್ಯ ವಿಮೆ ಮಾಡಿದ್ದೇವೆ. ಸೇವಾ ಭದ್ರತೆ ಬಗ್ಗೆಯು ಚಿಂತನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ವಾರಕ್ಕೆ 15 ಗಂಟೆ ಕೆಲಸ ಮಾಡುವವರಿಗೆ ತಿಂಗಳಿಗೆ ಒಂದು ರಜೆ ಕೊಡಲು ತೀರ್ಮಾನ ಮಾಡಲಾಗಿದೆ. 2,800 ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಉಪನ್ಯಾಸಕರಿಗೂ ಇದು ಅನ್ವಯಿಸುತ್ತದೆ. ಅತಿಥಿ ಉಪನ್ಯಾಸಕರಿಗೆ ಗೌರವ ಕೊಡುತ್ತಿಲ್ಲ ಎಂಬುದನ್ನು ಗಂಭೀರವಾಗಿ ತೆಗೆದುಕೊಂಡು ಪ್ರಾಂಶುಪಾಲರಿಗೆ ಹೇಳಿದ್ದೇವೆ. ಅವರಿಗೆ ಗೌರವ ಕೊಡಬೇಕು, ನ್ಯಾಯಯುತವಾಗಿ ನೋಡಿಕೊಳ್ಳಬೇಕುಎಂಬ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಕೆಲವರಿಗೆ ಬ್ಲ್ಯಾಕ್ ಮೇಲ್ ಮಾಡೋ ಆಪಾದನೆ ಕೇಳಿ ಬಂದಿತ್ತು, ಅದಕ್ಕೂ ಬ್ರೇಕ ಹಾಕಿದ್ದೇವೆ. ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಲಾಗುವುದು. ಸೇವೆಯ ಮತ್ತು ಅಂಕಗಳ ಆಧಾರದಲ್ಲಿ 16 ವರ್ಷ ಸೇವೆ ಮಾಡಿದವರಿಗೆ ಡಾಕ್ಯುಮೆಂಟ್ ಡೇಟಾ ಮಾಡಿಕೊಂಡು ದಾಖಲಾತಿ ಮಾಡಿಕೊಳ್ಳಲು ಸರಳ ಪ್ರಕ್ರಿಯೆ ಮಾಡುತ್ತೇವೆ. ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುತ್ತೇವೆ. 6 ಸಾವಿರಕ್ಕೂ ಹೆಚ್ಚು ಹುದ್ದೆ ಸೃಷ್ಟಿಸುವ ಉದ್ದೇಶವಿದೆ.
