ಉದಯವಾಹಿನಿ, ಚನ್ನಪಟ್ಟಣ: ಗ್ರಾಹಕರ ಹಿತಾಸಕ್ತಿ ಕಾಯಲು ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಪ್ರತಿಯೊಬ್ಬರು ಕಾನೂನು ತಿಳಿದುಕೊಳ್ಳುವುದು ಅವಶ್ಯ ಎಂದು ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಕಿವಿಮಾತು ಹೇಳಿದರು.ನಗರದ ಶತಮಾನೋತ್ಸವ ಭವನದಲ್ಲಿ ಗ್ರಾಹಕ ಸಂರಕ್ಷಣೆ ಕಾಯ್ದೆ 2019ರ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ಹಕ್ಕುಗಳ ಅರಿವಿನ ಮಹತ್ವ ಮನವರಿಕೆ ಮಾಡಿಕೊಡುವ ಸಲುವಾಗಿ ರಾಷ್ಟ್ರೀಯ ಗ್ರಾಹಕ ದಿನ ಆಚರಿಸಲಾಗುತ್ತಿದೆ. ಗ್ರಾಹಕರು ತಾವು ಖರೀದಿಸಿದ ವಸ್ತು, ಸೇವೆ ಗುಣಮಟ್ಟ ಖಚಿತಪಡಿಸಿಕೊಳ್ಳಬೇಕು. ಖರೀದಿಸಿದ ವಸ್ತುವಿನ ಬಿಲ್ ಕಡ್ಡಾಯವಾಗಿ ಪಡೆಯಬೇಕು. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ಎಚ್ಚರ ವಹಿಸುವುದು ಅತ್ಯವಶ್ಯ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮಾತನಾಡಿ, ದಿನನಿತ್ಯ ಜೀವನಕ್ಕೆ ಅಗತ್ಯ ವಸ್ತು ಖರೀದಿಸುವಾಗ ನಡೆಯುವ ಮೋಸ, ವಂಚನೆಗೆ ಒಳಗಾಗುವುದನ್ನು ತಡೆಯಲು ಜಾಗೃತವಾಗಿರಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಗ್ರಾಹಕರು ಎಷ್ಟೇ ಜಾಗೃತರಾಗಿದ್ದರೂ ಒಂದೊಮ್ಮೆ ಮೋಸ ಹೋಗುವುದು ಸಹಜ. ಇಂತಹ ಸಂದರ್ಭದಲ್ಲಿ ಮೋಸ ಹೋದ ಯಾವುದೇ ಗ್ರಾಹಕ ತನಗಾದ ನಷ್ಟ ಹಿಂಪಡೆಯಲು ಗ್ರಾಹಕ ವೇದಿಕೆಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
