ಉದಯವಾಹಿನಿ, ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಓರೆಹಚ್ಚಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿದ್ಯಾಸಂಸ್ಥೆ ಆಯೋಜಿಸಿದ್ದ ‘ಬೆಂಗಳೂರು ಇಂಟರ್ ಕಾಲೇಜ್ ಕ್ವಿಜ್’ ಕಾರ್ಯಕ್ರಮದಲ್ಲಿಕ್ರೈಸ್ಟ್ ಅಕಾಡೆಮಿಯ ವಿದ್ಯಾರ್ಥಿಗಳಾದ ಹ್ಯಾನ್ಸೆಲ್ ರಿಜು ಮ್ಯಾಕ್ಯೂ ಮತ್ತು ವರುಣ್ ಗೋಯಲ್ ಪ್ರಥಮ ಸ್ಥಾನ ಪಡೆದುಕೊಂಡರು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ದೇಶದ ೮೨೦ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ ೧.೫ಲಕ್ಷ ರೂ ಬಹುಮಾನ ತನ್ನದಾಗಿಸಿಕೊಂಡಿತು. ಸಿಲಿಗುರಿಯ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್ ನ ರೋನಿತ್ ಬೋತ್ರಾ ಮತ್ತು ಕುಶಾಗ್ರಾ ಓಂ ಅವರಿಗೆ ೧ ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆದು ದ್ವಿತೀಯ ಸ್ಥಾನ ಪಡೆದರು. ತೃತೀಯ ಸ್ಥಾನವನ್ನು ಚೆನ್ನೈನ ಎಎಂಎಂ ಶಾಲೆಯ ಆರ್ಯನ್ ಘೋಷ್ ಮತ್ತು ಎಸ್. ಅಶ್ವಂತ್ ಪಡೆದು ೫೦ ಸಾವಿರ ನಗದು ಪಡೆದರು.ಈ ವೇಳೆ ಬೆಂಗಳೂರು ಮಾಹೆ ಡೆಪ್ಯುಟಿ ರಿಜಿಸ್ಟ್ರಾರ್ ಡಾ.ರಾಘವೇಂದ್ರ ಪ್ರಭು ಮಾತನಾಡಿ, ದೇಶಾದ್ಯಂತ ಹಮ್ಮಿಕೊಂಡ ಆನ್ ಲೈನ್ ಸುತ್ತುಗಳಲ್ಲಿ ನೂರಾರು ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ೨೪ ತಂಡಗಳು ಫಿನಾಲೆಯಲ್ಲಿ ಪಾಲ್ಗೊಂಡಿದ್ದವು.
