ಉದಯವಾಹಿನಿ, ಪೂರ್ವ ಆಫ್ರಿಕಾದ ರಾಷ್ಟ್ರ ಇಥಿಯೋಪಿಯಾದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದಕ್ಷಿಣ ಇಥಿಯೋಪಿಯಾದ ಮೂರು ಜಿಲ್ಲೆಗಳು ತತ್ತರಿಸಿದ್ದು, ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಇನ್ನೂ 125ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ಗ್ಯಾಮೊ ವಲಯದ ಗಚೊ ಬಾಬಾ, ಕಂಬ ಮತ್ತು ಬೊಂಕೆ ಜಿಲ್ಲೆಗಳು ಭೂಕುಸಿತದಿಂದ ಸಂಪೂರ್ಣ ಜರ್ಜರಿತವಾಗಿವೆ. ಭೂಕುಸಿತದ ತೀವ್ರತೆಗೆ ನೂರಾರು ಮನೆಗಳು ನೆಲಸಮವಾಗಿದ್ದು, ಅನೇಕರು ಜೀವಂತವಾಗಿ ಮಣ್ಣಿನಡಿ ಹೂತುಹೋಗಿದ್ದಾರೆ ಎಂದು ಜಿಲ್ಲಾ ಸಂವಹನ ಮುಖ್ಯಸ್ಥ ಅಬೆಬೆ ಅಗೇನಾ ತಿಳಿಸಿದ್ದಾರೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ಸಾಗುತ್ತಿದ್ದು, ಮಣ್ಣಿನಡಿ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ಸಾವು ಗೆದ್ದು ಬಂದ ಸಾಹಸಿಯಂತೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ದಕ್ಷಿಣ ಇಥಿಯೋಪಿಯಾ ಪ್ರಾದೇಶಿಕ ರಾಜ್ಯದ ಅಧ್ಯಕ್ಷ ತಿಲಹುನ್ ಕೆಬೆಡೆ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಮಳೆ ಇನ್ನೂ ನಿಂತಿಲ್ಲದ ಕಾರಣ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಅವರು ತುರ್ತು ಸೂಚನೆ ನೀಡಿದ್ದಾರೆ.
ಈ ಭೀಕರ ಮಳೆಯ ಆರ್ಭಟಕ್ಕೆ ಎಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಪಡೆಗಳು ನಾಪತ್ತೆಯಾದವರಿಗಾಗಿ ಹಗಲಿರುಳು ಶೋಧ ನಡೆಸುತ್ತಿವೆ.

Leave a Reply

Your email address will not be published. Required fields are marked *

error: Content is protected !!