
ಉದಯವಾಹಿನಿ, ವಿಜಯಪುರ: ತಿರುವಾಭರಣಗಳನ್ನು ಅಯ್ಯಪ್ಪನ ವಿಗ್ರಹಗಳ ಮೇಲೆ ಅಲಂಕರಿಸಲು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ಪಟ್ಟಣದ ಅಯ್ಯಪ್ಪ ನಗರದ ಕೆರೆಕೋಡಿ ಬಳಿ ಇರುವ ಅಖಿಲ ಭಾರತ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಪಂಪಾಗಣಪತಿ ದೇವಾಲಯದ ಗುರುಸ್ವಾಮಿ ಜೆ.ವಿ. ಮುನಿರಾಜು ತಿಳಿಸಿದರು.
ಇವರು ಪಟ್ಟಣದ ಅಯ್ಯಪ್ಪ ನಗರದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ರವರ ತಿರುವಾಭರಣಗಳನ್ನು ಇಂದು ಮುಂಜಾನೆ ಪಟ್ಟಣದ ಮೂಲ ರಂಗನಾಥ ಸ್ವಾಮಿ ದೇವಾಲಯದಿಂದ ಹೊರತೊಂದು ಶ್ರೀ ಅಯ್ಯಪ್ಪ ಸ್ವಾಮಿ ರವರಿಗೆ ಈ ಆಭರಣಗಳಿಂದ ಅಲಂಕರಿಸಿ ತಿರುವಾಭರಣಗಳ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಿರುವಾಭರಣವನ್ನು ಅಯ್ಯಪ್ಪನ ಪವಿತ್ರ ಆಭರಣವೆಂದು ಪರಿಗಣಿಸಲಾಗುತ್ತದೆ ಹಾಗೂ ಈ ಉತ್ಸವವು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಪವಿತ್ರ ಉತ್ಸವ ವಾಗಿರುತ್ತದೆ ಎಂದು ತಿಳಿಸಿದರು.
ಪಂಪ ಗಣಪತಿ ದೇವಸ್ಥಾನದ ಮುರಳಿ ಸ್ವಾಮಿ ಮಾತನಾಡಿ ಈ ದಿನ ಶ್ರೀ ಸ್ವಾಮಿರವರಿಗೆ ವಿಶೇಷ ಅಲಂಕಾರಕ್ಕಾಗಿ ಕಿರೀಟ ಧಾರಣೆ ಪದಕ, ಮುತ್ತು, ಹವಳದ ಮಾಲೆಗಳು, ವಜ್ರಂಗಿ, ಬಿಲ್ಲು,ಬಾಣ, ಕೈ ಬಳೆಗಳು, ತೋಳು ಬಳೆಗಳು, ಕಂಟಮಾಲೆ, ಯಜ್ಞೋಪವಿತ್ರ, ಉಂಗುರಗಳು ಸೇರಿ ರೇಷ್ಮೆ ವತ್ರದೊಂದಿಗೆ ಶ್ರೀ ಸ್ವಾಮಿರವರನ್ನು ಅಲಂಕರಿಸಲು ಈ ತಿರುವಾಭರಣ ಉತ್ಸವದಲ್ಲಿ ಮೆರೆವಣಿಗೆ ಮೂಲಕ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ರವರನ್ನು ದೇವಾಲಯದ ಆವರಣಕ್ಕೆ ಮಕರ ಸಂಕ್ರಮಣದ ಪಡಿಪೂಜೆ ಗಾಗಿ ದೇವಾಲಯದ ಆವರಣಕ್ಕೆ ಉತ್ಸವದ ಮೂಲಕ ಕರೆತಂದು ಪೂಜಿಸ ಲಾಗುವುದೆಂದರು.
ಈ ಉತ್ಸವದ ಅಂಗವಾಗಿ ಪ್ರಾತಃಕಾಲ ದೇವಾಲಯದ ಆವರಣದಲ್ಲಿ ಸಮಸ್ತ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಂದ ಶ್ರೀ ಸ್ವಾಮಿರವರಿಗೆ ತುಪ್ಪ ಹಾಗೂ ಗಂಧದ ಅಭಿಷೇಕ, ಶರಣ ಘೋಷಣೆಗಳೊಂದಿಗೆ ಸ್ವಾಮಿ ರವರನ್ನು ಅಲಂಕರಿಸಿ ಪಟ್ಟಣದ ರಾಜ ಬೀದಿಗಳ ಉತ್ಸವಕ್ಕೆ ಮಂಗಳವಾದ್ಯಗಳೊಂದಿಗೆ ಹಾಗೂ ವೀರಗಾಸೆ ಕುಣಿತದೊಂದಿಗೆ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀ ಸ್ವಾಮಿರವರನ್ನು ಪ್ರತಿಷ್ಠಾಪಿಸಿ ಉತ್ಸವವನ್ನು ಕೈಗೊಳ್ಳಲಾಯಿತು.
