ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಿಎಂ ಪುತ್ರ ಯತೀಂದ್ರ ಅವರು ಹೇಳಿದ್ದು, ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಅವರ(ಸಿದ್ದರಾಮಯ್ಯ) ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ಅದರಲ್ಲಿ ಅನುಮಾನ ಬೇಡ ಎಂದರು.
ನಮ್ಮ ಸರ್ಕಾರ ಬಲಿಷ್ಠವಾಗಿದೆ. ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ ನಮ್ಮ ರಾಜ್ಯದ ಮುಖ್ಯಮಂತ್ರಿ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ನಾವಿಬ್ಬರು ಸೇರಿ ಒಟ್ಟಿಗೆ ಚುನಾವಣೆ ಮಾಡುತ್ತೇವೆ. ಆದ್ರೆ, ಅವರ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಹೇಳಿಕೆ ಪ್ರತಿಕ್ರಿಯಿಸಿದ ಡಿಕೆಶಿ, ಆಸೆ ಪಡುವುದು, ಹೇಳೋದು, ಜನರಿಗೆ ಮನವಿ ಮಾಡುವುದು ಸಾಮಾನ್ಯ. ನಾನು ನನ್ನೂರಿಗೆ ಹೋದಾಗ ನನಗೆ ಶಕ್ತಿ ಕೊಡಿ ಎಂದು ಕೇಳುತ್ತೇನೆ. ಅದು ಸ್ವಾಭಾವಿಕ, ಬೇರೆ ರೀತಿ ಯಾಕೆ ಟ್ವಿಸ್ಟ್ ಮಾಡಬೇಕು. ಯತೀಂದ್ರ ಸೂಕ್ಷ್ಮ ವ್ಯಕ್ತಿ, ಉದ್ಬವ ಆಗುತ್ತಿರುವ ನಾಯಕ. ನಾವು ಅವರಿಗೆ ಸಹಕಾರ ಕೊಡೋಣ. ಬಿಜೆಪಿಯವರು ಅವರ ಪಕ್ಷವನ್ನ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
