ಉದಯವಾಹಿನಿ, ಆನೇಕಲ್ : ಸಾರಿಗೆ ಇಲಾಖೆಯ ವತಿಯಿಂದ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸಮೀಪದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ವೆಂಕಟೇಶ್ವರಲು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ವಾಹನ ಸವಾರರು ವಾಹನ ಸುರಕ್ಷತಾ ಕ್ರಮ ಅನುಸರಿಸುವುದರಿಂದ ಹಲವಾರು ಅಪಾಯಗಳಿಂದ ರಕ್ಷಣೆ ಪಡೆಯಬಹುದಾಗಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವುದು, ವಿಮೆ, ಪರವಾನಗಿ, ವಾಹನಗಳ ಎಫ್‌ಸಿ ಸೇರಿದಂತೆ ನಿಯಮಾನುಸಾರ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ವಾಹನ ಚಾಲಕರು ಮತ್ತು ಮಾಲೀಕರು ಕೈಗೊಳ್ಳಬೇಕು ಎಂದು ಹೇಳಿದರು.ಮುಂಬರುವ ದಿನಗಳಲ್ಲಿ ಸಾರಿಗೆ ಇಲಾಖೆಯಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಫಾಸ್ಟ್‌ಟ್ಯಾಗ್ ಮಾದರಿಯಲ್ಲಿ ವಾಹನಗಳ ಎಲ್ಲಾ ಮಾಹಿತಿಗಳು ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದ ಕೂಡಲೇ ಪೊಲೀಸ್ ಠಾಣೆ, ಆರೋಗ್ಯ ಕೇಂದ್ರ ಮತ್ತು ಸಾರಿಗೆ ಇಲಾಖೆಗೆ ಫೋಟೋ ಸಮೇತ ಸಂದೇಶ ಕಳುಹಿಸುವ ತಂತ್ರಜ್ಞಾನವನ್ನು ಸರ್ಕಾರ ತರುತ್ತಿದೆ ತಿಳಿಸಿದರು.
ಸಾರಿಗೆ ಇಲಾಖೆಯ ಮೋಟರು ವಾಹನ ನಿರೀಕ್ಷಕ ರಾಘವೇಂದ್ರಾಚಾರಿ ಮಾತನಾಡಿ, ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಜನರ ಪ್ರಾಣ ಉಳಿಸಿದಂತಾಗುತ್ತದೆ ಎಂದರು.ಸಾರಿಗೆ ಇಲಾಖೆಯ ಶಶಿಕಲಾ, ಸುನೀಲ್, ಮುನೇಶ್ ಇದ್ದರು.
