ಉದಯವಾಹಿನಿ, ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ಮುನಿಸಿಕೊಂಡು ಬಿಜೆಪಿ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಒಂಬತ್ತು ತಿಂಗಳಲ್ಲೇ ಬಿಜೆಪಿಗೆ ಮರಳಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿದ್ದಾಗ ಮಾಡಿದ ಮಾತುಗಳು ಇವು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗ ಬೇಕು ಎಂಬುದು ನನ್ನನ್ನು ಸೇರಿಸಿ ಕೋಟ್ಯಂತರ ಜನರ ಅಭಿಲಾಷೆ. ಆದರೆ, ಬಿಜೆಪಿ ಧರ್ಮದಲ್ಲಿ ರಾಜಕೀಯ ಬೆರೆಸಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದೆ. ರಾಮಮಂದಿರ ಉದ್ಘಾಟನೆ ಮುಖ್ಯವೋ, ಕಾಂಗ್ರೆಸ್‌ ಪಕ್ಷ ಟೀಕಿಸುವುದು ಮುಖ್ಯವೋ? ಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಹೋಗದಿದ್ದರೆ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಿ, ಲೋಕಸಭಾ ಚುನಾವಣೆಗೆ ಉಪಯೋಗಿಸಿಕೊಳ್ಳುವುದು ಬಿಜೆಪಿಯ ಷಡ್ಯಂತ್ರ ಕಾಂಗ್ರೆಸ್‌ ಹಿಂದೂ ವಿರೋಧಿಯಾಗಿದ್ದರೆ, ಹಿಂದೂಗಳು ಮತ ಹಾಕದಿದ್ದರೆ ರಾಜ್ಯದಲ್ಲಿ 136 ಸ್ಥಾನ ಬರಲು ಸಾಧ್ಯವಿತ್ತೇ? ಧಾರ್ಮಿಕ ವಿಷಯಗಳು ಭಾವನಾತ್ಮಕ ಹಾಗೂ ತಾತ್ಕಾಲಿಕವಾಗಿದ್ದು, ಬಿಜೆಪಿ ಇದನ್ನೇ ಮುಂದಿಟ್ಟುಕೊಂಡು ಮಾತನಾಡುತ್ತಿದ್ದರೆ ಜಾಸ್ತಿ ದಿನ ಇರುವುದಿಲ್ಲ.
ಶ್ರೀಕಾಂತ ಪೂಜಾರಿಗೆ ಸಂಬಂಧಿಸಿದ ಬೆಳವಣಿಗೆಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದಿವೆ. ಇದರ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕೈವಾಡವಿದೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅವರು ಹಿಂದೂ-ಮುಸ್ಲಿಮರ ನಡುವೆ ವೈಮನಸ್ಸು ಮೂಡಿಸುತ್ತಿದ್ದಾರೆ. ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಆ ಪಕ್ಷದಿಂದ ಹೊರ ಹೋಗುವವರನ್ನು ತಡೆಯುವ ಕೆಲಸವಾಗುತ್ತಿದೆ. ನಾನು ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಈವರೆಗೂ ನನ್ನನ್ನು ಯಾರೂ ಭೇಟಿಯಾಗಿಲ್ಲ. ಭೇಟಿಯಾಗುವ ಅಗತ್ಯವೂ ಇಲ್ಲ.

 

Leave a Reply

Your email address will not be published. Required fields are marked *

error: Content is protected !!