ಉದಯವಾಹಿನಿ, ಹಾಸನ: ಗಣರಾಜ್ಯೋತ್ಸವದ ಅಂಗವಾಗಿ ನಗರದ ಬಿ.ಎಂ. ರಸ್ತೆ ಪಕ್ಕದಲ್ಲಿರುವ ಸಿಲ್ವರ್ ಜುಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ಜ.26 ರಿಂದ ಮೂರು ದಿನಗಳ ಕಾಲ ಫಲ- ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಮಂಗಳಾ ತಿಳಿಸಿದರು.
ನಗರದ ಸಿಲ್ವರ್ ಜುಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ಜನವರಿ 26ರಂದು ಫಲಪುಷ್ಪ ಪ್ರದರ್ಶನ ಉದ್ಘಾಟನೆ ಹಾಗೂ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಅವರ ಪುತ್ಥಳಿ ಅನಾವರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನೆರವೇರಿಸಲಿದ್ದಾರೆ, ಸ್ಥಳೀಯ ಶಾಸಕ ಸ್ವರೂಪ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.8ಬಾರಿ ಮೈಸೂರು ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತು ನಾಡಿನ ಕೀರ್ತಿ ಹೆಚ್ಚಿಸಿದ್ದ. ಪುಂಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಅರ್ಜುನ ಆನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆನೆಯ ಮಾದರಿಗೆ ವಿವಿಧ ಅಲಂಕಾರಿಕ ಪುಷ್ಪಗಳಿಂದ ಸಿಂಗರಿಸಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.

ವಿಶೇಷವಾಗಿ ಮಾನವನ ಸಾರಿಗೆ ವ್ಯವಸ್ಥೆಯೇ ಆಧುನಿಕತೆ ಅನ್ವೇಷಣೆಯನ್ನು ಪ್ರತಿಬಿಂಬಿಸುವ ಸೈಕಲ್, ಎತ್ತಿನ ಗಾಡಿ, ಬಸ್‌, ರೈಲು ಹಾಗೂ ವಿಮಾನದ ಮಾದರಿಗಳಿಗೆ ಪುಷ್ಪಗಳಿಂದ ಸಿಂಗರಿಸಿ ಪ್ರದರ್ಶಿಸಲಾಗುವುದು. ಏಷ್ಯನ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು, ಹೆಸರಾಂತ ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ಹರಿಹರ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಚಿತ್ರಗಳನ್ನು ವಿವಿಧ ಹಣ್ಣು ಮತ್ತು ತರಕಾರಿಗಳಲ್ಲಿ ಕೆತ್ತನೆ ಮಾಡಿರುವುದನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!