ಉದಯವಾಹಿನಿ, ಬೆಂಗಳೂರು: ಬಾಂಬ್ ಸ್ಪೋಟ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‍ಎಸ್‍ಎಲ್ ವರದಿ ಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ದೃಢಪಟ್ಟಿದೆ ಎಂದರು.

ಇಂಥ ಸಂದರ್ಭದಲ್ಲಿ ರಾಜ್ಯ ಸರಕಾರ, ಸಚಿವರ ಹೇಳಿಕೆಗಳು ಕೇವಲ ಬಿಜೆಪಿ ಮಾತ್ರವಲ್ಲ, ಸಾಮಾನ್ಯಜನರಿಗೂ ವಿಶ್ವಾಸ ಹುಟ್ಟಿಸುವಂತಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಸಚಿವರು ಆ ರೀತಿ ಘೋಷಣೆ ಕೂಗಿಯೇ ಇಲ್ಲ ಎಂದಿದ್ದರು. ಬಿಜೆಪಿಯವರಿಗೆ ಮಾಡುವುದಕ್ಕೆ ಕೆಲಸ ಇಲ್ಲ ಎಂದಿದ್ದರು. ವಿಧಾನಸೌಧಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಸಿ.ಸಿ.ಟಿ.ವಿ. ಫೂಟೇಜ್ ಗಮನಿಸಿ ಅರ್ಧ ಗಂಟೆಯಲ್ಲಿ ಅವರನ್ನೆಲ್ಲ ಹಿಡಿದು ಒಳಗೆ ಹಾಕಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ಆಕ್ಷೇಪಿಸಿದರು.

ಎಫ್‍ಎಸ್‍ಎಲ್ ವರದಿ ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಘಟನೆ ನಡೆದು ನಾಲ್ಕೈದು ದಿನ ಕಳೆದಿದೆ. ಇವತ್ತಿಗೂ ಎಫ್.ಎಸ್.ಎಲ್ ವರದಿ ಬಂದಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಎಫ್.ಎಸ್.ಎಲ್ ವರದಿ ಬಂದಿದೆ; ಪಾಕ್ ಪರ ಘೋಷಣೆ ದೃಢವಾಗಿದೆ ಎಂದು ಪತ್ರಿಕೆಗಳು, ಮಾಧ್ಯಮಗಳು ವರದಿ ಮಾಡಿವೆ. ಇದರ ಮಧ್ಯೆ ಮುಖ್ಯಮಂತ್ರಿಗಳು ಎಫ್.ಎಸ್.ಎಲ್ ವರದಿ ಬಂದೇ ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ ಎಂದು ವಿವರಿಸಿದರು.ರಾಜ್ಯದ ಜನರಲ್ಲೂ ಆತಂಕ ಕಾಡುತ್ತಿದೆ. ಇಂಥ ಘಟನೆಗಳನ್ನು ಎಷ್ಟು ಗಂಭೀರವಾಗಿ ರಾಜ್ಯ ಸರಕಾರ ತೆಗೆದುಕೊಳ್ಳಬೇಕೋ, ಇಂಥ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಎಷ್ಟು ಗಂಭೀರವಾಗಿ ವರ್ತಿಸಬೇಕೋ ಅಂಥ ಗಂಭೀರತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು. ಪಾಕಿಸ್ತಾನ ಜಿಂದಾಬಾದ್ ಘಟನೆ ಕುರಿತು ನಿರ್ಧರಿಸಲು 5 ದಿನ ಬೇಕೇ? ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಮರುಪ್ರಶ್ನೆ ಹಾಕಿದರು. ಹಾದಿಬೀದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಲ್ಲ. ವಿಧಾನಸೌಧದಲ್ಲಿ ಕೂಗಿರುವಾಗ ದೇಶದ್ರೋಹಿಗಳನ್ನು ಬಂಧಿಸಿಲ್ಲವೆಂದರೆ ನಿಮ್ಮ ಇಚ್ಛಾಶಕ್ತಿ ಕೊರತೆಯೇ? ಅಥವಾ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನದ ಜೊತೆಗೆ, ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಆಗುವುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ; ಅದನ್ನು ಸ್ಪಷ್ಟವಾಗಿ ಹೇಳುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!