ಉದಯವಾಹಿನಿ, ಹುಬ್ಬಳ್ಳಿ, : ಮಹದಾಯಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉತ್ತರ ಕೊಡಬೇಕು. ಇದೇ ಮಹದಾಯಿ ವಿಚಾರವನ್ನು ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು. ಹಾಗಾದರೆ ಇನ್ನೂ ಏಕೆ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಭೀರವಾಗಿ ಪ್ರಶ್ನಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಪ್ರಲ್ಹಾದ್ ಜೋಶಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಅವರಿಗೊಂದು ಗೌರವ. ಆದರೆ ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಮಹದಾಯಿ ಬಗ್ಗೆ ಅವರು ಉತ್ತರಿಸಲಿ ಎಂದವರು ಖಡಕ್ಕಾಗಿ ನುಡಿದರು.

ಶೆಟ್ಟರ್ ಪಶ್ಚಾತಾಪದ ಹೇಳಿಕೆ ಬರಲಿದೆ: ಕಾಂಗ್ರೆಸ್‍ನಲ್ಲಿ ಫ್ಲಡ್ ಗೇಟ್ ಓಪನ್ ಆಗುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ತಿಂಗಳ ಬಳಿಕ ಶೆಟ್ಟರ್ ಪಶ್ಚಾತಾಪದ ಹೇಳಿಕೆ ಹೊರಗಡೆ ಬರಲಿದೆ, ಕಾದು ನೋಡಿ ಎಂದು ಶಿವಕುಮಾರ ಅರ್ಥಗರ್ಭಿತವಾಗಿ ಒತ್ತಿಹೇಳಿದರು.ಪಾಕ್ ಪರ ಘೋಷಣೆ ವಿಚಾರದಲ್ಲಿ ಸಿಎಂ ಡಿಸಿಎಂ ರಾಜೀನಾಮೆಗೆ ಆಗ್ರಹ ವಿಚಾರವಾಗಿ, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಅವರನ್ನ ಏಕೆ ಬಂಧನ ಮಾಡಲಿಲ್ಲ? ನಾವು ಘೋಷಣೆ ಕೂಗಿದವರ ವಿಚಾರಣೆ ಮಾಡುತ್ತಿದ್ದೇವೆ. ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದಾರೆ. ಬಿಜೆಪಿಯವರಿಗೆ ಬದ್ಧತೆ ಇದೆಯಾ? ಎಂದು ಹರಿಹಾಯ್ದರು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿ, ನಾಳೆ ಚುನಾವಣಾ ಸಮಿತಿ ಸಭೆ ಇದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದರು. ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಕುರಿತಂತೆ, ಕೇವಲ ಇಬ್ಬರು ಮೂವರಲ್ಲ ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್‍ಗೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!