ಉದಯವಾಹಿನಿ, ಬೆಂಗಳೂರು : ವಿಧಾನಸಭೆ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್‍ಗೆ ಉಪರಾಷ್ಟ್ರಪತಿಗಳು ಅಧಿಕಾರ ಗೌಪ್ಯತೆ ಪ್ರಮಾಣವಚನ ಬೋಧಿಸಬಾರದು ಎಂದು ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಪತ್ರ ಬರೆದಿದ್ದಾರೆ. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸ್ವಯಂ ನಿವೃತ್ತಿ ಪಡೆದ ಭಾಸ್ಕರ್ ರಾವ್ ನೇತೃತ್ವದಲ್ಲಿ 17 ಐಎಎಸ್ ಅಧಿಕಾರಿಗಳ ಸಹಿವುಳ್ಳ ಪತ್ರವನ್ನು ರಾಜ್ಯಸಭೆಯ ಸಭಾಪತಿಯಾಗಿರುವ ಉಪರಾಷ್ಟ್ರಪತಿ ಜಗದೀಶ್ ಧನ್ಕರ್‍ಗೆ ಪತ್ರ ಬರೆದಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಗಳಾದ ಎಂ ಮದನ್ ಗೋಪಾಲ್, ಎಂ ಲಕ್ಷ್ಮೀನಾರಾಯಣ, ಅನಿಲ್ ಕುಮಾರ್, ಮುದ್ದುಮೋಹನ್, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಗೋಪಾಲ್ ಹೊಸೂರ್ ಸೇರಿದಂತೆ 22 ಅಧಿಕಾರಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವ ಪ್ರಕರಣ ಇತ್ಯರ್ಥವಾಗುವರೆಗೂ ಪ್ರಮಾಣ ವಚನ ಬೋಧಿಸದಂತೆ ಮನವಿ ಮಾಡಿದ್ದಾರೆ.

ಕಳೆದ ಫೆ.27ರಂದು ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜೇತರಾದ ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಜಯೋತ್ಸವ ಆಚರಣೆ ಮಾಡುವ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಎಫ್‍ಎಸ್‍ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಪೊಲೀಸರು ನಾಸೀರ್ ಹುಸೇನ್ ಅವರ ಮೂವರು ಬೆಂಬಲಿಗರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇವರೆಲ್ಲರೂ ನಾಸೀರ್ ಹುಸೇನ್ ಅವರ ಬೆಂಬಲಿಗರಾಗಿರುವುದರಿಂದ ಉಪರಾಷ್ಟ್ರಪತಿಗಳು ದೇಶ ವಿರೋಧಿ ಘೋಷಣೆ ಕೂಗಲು ಕುಮ್ಮಕ್ಕು ನೀಡಿದ ಆರೋಪದ ಮೇಲೆ ಅಧಿಕಾರ ಗೌಪ್ಯತೆ ಬೋಧಿಸಬಾರದೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸುಮಾರು ಮೂರು ಪುಟಗಳ ಪತ್ರ ಬರೆದಿರುವ ಅಧಿಕಾರಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವುದು ದೇಶವಿರೋಧಿ ಚಟುವಟಿಕೆಗೆ ಸಮ. ಇದನ್ನು ಗಂಭೀರವಾಗಿ ಪರಿಗಣಿಸಿ ನಾಸೀರ್ ಹುಸೇನ್‍ಗೆ ಅಧಿಕಾರ ಗೌಪ್ಯತೆ ಬೋಧಿಸಬಾರದು. ನಿಮಗಿರುವ ಅಧಿಕಾರವನ್ನು ಚಲಾಯಿಸಿ ಎಂದು ಕೋರಿದ್ದಾರೆ. ಅಧಿಕಾರಿಗಳ ಈ ನಿಲುವನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಬೆಂಬಲಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಅವರು ಪೋಸ್ಟ್ ಮಾಡಿ ಹಿರಿಯ ಅಧಿಕಾರಿಗಳ ನಿಲುವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!