ಉದಯವಾಹಿನಿ,  ಬೆಂಗಳೂರು : ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಸಿರುವ ಉಗ್ರನ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು, ಹಿಂದೆ ಇಂತಹ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ ಸ್ಫೋಟಗಳ ಸಂಚು ನಡೆಸಿದ್ದವರನ್ನು ಎರಡನೇ ಸುತ್ತಿನ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದಲ್ಲಿರುವ ಶಂಕಿತ ಉಗ್ರ ಮಿನಾಝ್ ಅಲಿಯಾಸ್ ಸುಲೈಮಾನ್‌ನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದು, ಕೆಫೆ ಬಾಂಬರ್‌ಗೂ ಇರಬಹುದಾದ ಲಿಂಕ್‌ಗಳನ್ನು ಭೇದಿಸಲು ಯತ್ನಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ ೨೦೨೩ರ ಡಿಸೆಂಬರ್‌ನಲ್ಲಿ ಬಂಧಿತನಾಗಿ ಈಗ ಪರಪ್ಪನ ಅಗ್ರಹಾರದಲ್ಲಿರುವ ಮಿನಾಝ್‌ನನ್ನು ಎನ್‌ಐಎ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಿಹಾದಿ ಸಂಘಟನೆಗಳು, ಖಲೀಫತ್ ಹಾಗೂ ಐಸಿಸ್ ಸಂಘಟನೆಗಳ ಜೊತೆ ಈತ ನಿಕಟ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಜೈಲಿನಲ್ಲಿದ್ದಾನೆ. ಈ ಹಿಂದೆ ಎನ್‌ಐಎ ಅಧಿಕಾರಿಗಳೇ ಈತನಲ್ಲಿಗೆ ದಾಳಿ ನಡೆಸಿ ಬಳ್ಳಾರಿಯಲ್ಲಿ ಬಂಧಿಸಿದ್ದರು. ನಿನ್ನೆಯಷ್ಟೇ ಈತನನ್ನು ಜೈಲಿನಲ್ಲಿ ವಿಚಾರಣೆ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಇಂದು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ.
ಐಎಸ್‌ಐಎಸ್ ಉಗ್ರ ಸಂಘಟನೆಯ ಭಾರತದ ಮಾಡ್ಯೂಲ್ ಮೇಲೆ ದೇಶದಾದ್ಯಂತ ನಾಲ್ಕು ರಾಜ್ಯಗಳ ೧೯ ಸ್ಥಳಗಳಲ್ಲಿ ಕಳೆದ ಡಿಸೆಂಬರ್‌ನಲ್ಲಿ ಎನ್‌ಐಎ ದಾಳಿ ನಡೆಸಿತ್ತು. ಈ ವೇಳೆ ಬಳ್ಳಾರಿಯಲ್ಲಿ, ಸುಧಾರಿತ ಸ್ಪೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮಿನಾಝ್ ಅಲಿಯಾಸ್ ಸುಲೈಮಾನ್ ಮತ್ತು ಸೈಯ್ಯದ್ ಸಮೀರ್ ಎಂಬವರನ್ನು ಬಂಧಿಸಿತ್ತು.
ಈ ಉಗ್ರ ಸಂಘಟನೆಯ ಮಾಡ್ಯೂಲ್ ನೇತೃತ್ವನ್ನು ಬಳ್ಳಾರಿ ಮೂಲದ ಮಿನಾಝ್ ಅಲಿಯಾಸ್ ಎಂಡಿ ಸುಲೈಮಾನ್ ವಹಿಸಿದ್ದ. ಇವರು ಐಸಿಸ್‌ನ ಭಯೋತ್ಪಾದನೆ ಸಂಬಂಧಿತ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎನ್‌ಐಎ ದಾಳಿಯಲ್ಲಿ ಸ್ಫೋಟಕ ಕಚ್ಚಾ ಸಾಮಗ್ರಿಗಳಾದ ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್ ಪೌಡರ್, ಸಕ್ಕರೆ ಮತ್ತು ಎಥೆನಾಲ್ ಮತ್ತು ಹರಿತವಾದ ಆಯುಧಗಳು, ನಗದು, ಸ್ಮಾರ್ಟ್‌ಪೋನ್‌ಗಳು, ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *

error: Content is protected !!