ಉದಯವಾಹಿನಿ, ನ್ಯಾಶ್‌ವಿಲ್ಲೆ : ಆಧುನಿಕ ವೈದ್ಯಕೀಯ ಲೋಕವೇ ಬೆರಗಾಗುವಂತಹ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಕೇವಲ 22 ವಾರಕ್ಕೆ ಅಂದರೆ ಅವಧಿಗೂ ಮುನ್ನವೇ ಜನಿಸಿದ, ಕೇವಲ 450 ಗ್ರಾಂ ತೂಕವಿದ್ದ ಹಸುಳೆಯೊಂದು ವೈದ್ಯರ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಿಂದ ಪಾರಾಗಿ ಮನೆಗೆ ಮರಳಿದೆ.ಗೇಬ್ರಿಯಲ್ ಗೋಲ್ಡನ್ ಎಂಬ ಹೆಸರಿನ ಈ ಮಗು ಬದುಕುವ ಸಾಧ್ಯತೆ ಶೇ. 5ಕ್ಕಿಂತಲೂ ಕಡಿಮೆ ಇತ್ತು ಎಂದು ವೈದ್ಯರು ಹೇಳಿದ್ದರು. ಗೇಬ್ರಿಯಲ್ ಜನಿಸಿದಾಗ ಆತನ ಕೈಗಳು ಪೆನ್ಸಿಲ್‌ನಷ್ಟು ತೆಳ್ಳಗಿದ್ದವು. ಮಗುವಿನ ಇಡೀ ಹಸ್ತವು ತಂದೆಯ ಬೆರಳಿನ ಒಂದು ಭಾಗಕ್ಕಿಂತಲೂ ಚಿಕ್ಕದಾಗಿತ್ತು. ತಾಯಿ ಕ್ಯಾರೋಲಿನ್ ಅವರು ಗರ್ಭಧಾರಣೆಯ 14ನೇ ವಾರದಿಂದಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ತೀವ್ರ ರಕ್ತಸ್ರಾವವು ಶುರುವಾಗಿತ್ತು. 18ನೇ ವಾರದಲ್ಲೇ ಗರ್ಭಕೋಶದ ನೀರು ಒಡೆದಾಗ, ಮಗು ಬದುಕುವ ಭರವಸೆಯನ್ನು ವೈದ್ಯರು ಕೈಬಿಟ್ಟಿದ್ದರು. ಆದರೆ ಹುಟ್ಟಿದ ಮಗು ಬೀದಿಂಗ್ ಟ್ಯೂಬ್‌ಗೆ ಸ್ಪಂದಿಸಿದ್ದರಿಂದ ವೈದ್ಯರು ತೀವ್ರ ನಿಗಾ ಘಟಕದಲ್ಲಿ (NICU) ಚಿಕಿತ್ಸೆ ಆರಂಭಿಸಿದರು.
ಸುಮಾರು ಒಂದು ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಕಳೆದ ಈ ಪುಟ್ಟ ಕಂದಮ್ಮನಿಗೆ ಶ್ವಾಸಕೋಶದ ಕಾಯಿಲೆ ಕಾಣಿಸಿಕೊಂಡಿತ್ತು. ಉಸಿರಾಟ ಸುಲಭವಾಗಲು ವೈದ್ಯರು ಗಂಟಲಿಗೆ ಶಸ್ತ್ರಚಿಕಿತ್ಸೆಯನ್ನು (Tracheostomy) ಮಾಡಿದ್ದರು. ಚಿಕಿತ್ಸೆಯ ನಡುವೆ ಹಲವು ಬಾರಿ ನ್ಯುಮೋನಿಯಾ ತಗುಲಿ ಮಗು ಪ್ರಾಣಾಪಾಯಕ್ಕೆ ಸಿಲುಕಿತ್ತು. ಆದರೂ ಧೃತಿಗೆಡದ ವೈದ್ಯರ ತಂಡ ಅತ್ಯಾಧುನಿಕ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಮುಂದುವರಿಸಿತು. ಇತ್ತ ತಂದೆ ಗ್ಯಾರೆತ್ ಅವರು ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ದಿನಕ್ಕೆ ಆರು ಗಂಟೆಗಳ ಕಾಲ ಪ್ರಯಾಣಿಸಿ ಕೆಲಸ ಮಾಡುತ್ತಿದ್ದರೆ, ತಾಯಿ ಆಸ್ಪತ್ರೆಯಲ್ಲೇ ಉಳಿದು ಮಗುವನ್ನು ನೋಡೊಕೊಂಡಿದ್ದರು.
