ಉದಯವಾಹಿನಿ, ಹಾಸನ: ನಮ್ಮ ಕುಟುಂಬದ ವಿರುದ್ಧ ಕೇವಲ ಕುಟುಂಬ ರಾಜಕಾರಣ ಎಂಬ ಆರೋಪವನ್ನು ಹೊರತುಪಡಿಸಿದರೆ ಬೇರೇನೂ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದರು. ನಗರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಐದು ವರ್ಷಗಳ ಸಾಧನಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾತೆತ್ತಿದ್ದರೆ ನಾನು ಪ್ರಧಾನಿಯಾಗಿದ್ದೆ, ಮಗ ಮುಖ್ಯಮಂತ್ರಿಯಾಗಿದ್ದ, ಇನ್ನೊಬ್ಬ ಮಗ ಮಂತ್ರಿ, ಮೊಮ್ಮಗ ಎಂಪಿ, ಮಗದೊಬ್ಬ ಎಂಎಲ್‍ಸಿ ಅನ್ನೋದು ಬಿಟ್ಟರೆ ವಿರೋಧಿಗಳಿಗೆ ಬೇರೇನೂ ಇಲ್ಲ ಎಂದು ತಿರುಗೇಟು ನೀಡಿದರು.

ಲೋಕಸಭಾ ಚುನಾವಣೆಗೆ ಶತದಿನವೂ ಇಲ್ಲ. ಆಗಲೇ ನಮ್ಮ ಮೇಲೆ ಗದಾಪ್ರಹಾರ ಶುರು ಮಾಡಿದ್ದಾರೆ. ಅರಸೀಕೆರೆ, ಹಾಸನದಲ್ಲಿ ಸಿಎಂ-ಡಿಸಿಎಂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಟೀಕಾ ಪ್ರಹಾರ ಮಾಡಿದ್ದಾರೆ ಎಂದರು. ಹಾಸನ ಸರ್ಕಾರಿ ಆಸ್ಪತ್ರೆ ಉದ್ಘಾಟನೆ ಸಂಬಂಧ ಸಿಎಂ-ಡಿಸಿಎಂ ವಿರುದ್ಧ ಕಿಡಿಕಾರಿದ ಗೌಡರು, ಆಸ್ಪತ್ರೆ ಆಗಿದ್ದು ಯಾವಾಗ ಸತ್ಯ ಹೇಳಿ, ಶಂಕುಸ್ಥಾಪನೆ ಆಗಿದ್ದು ಯಾವಾಗ, ಮೆಡಿಕಲ್ ಕಾಲೇಜು ಉಳಿಸಿದ್ದ ಸನ್ನಿವೇಶ ನನಗೆ ಗೊತ್ತಿದೆ. ಧರ್ಮಸಿಂಗ್ ಸಿಎಂ ಆಗಿದ್ದಾಗ ಅಡಿಗಲ್ಲು ಹಾಕಿದ್ದು. ಅಂದು ಪ್ರಧಾನಿಯಾಗಿದ್ದ ನರಸಿಂಹರಾವ್, ವಿಶ್ವಬ್ಯಾಂಕ್‍ನಿಂದ ಬಂದಿದ್ದ 880 ಕೋಟಿ ಹಣವನ್ನು ದೇವೇಗೌಡರಿಗೆ ಗೌರವ ಕೊಡಬೇಕು ನೀಡಿದ್ದರು ಎಂದು ನೆನೆಪಿಸಿಕೊಂಡರು.

ಪ್ರಜ್ವಲ್‍ಗೆ ಮಾರ್ಗದರ್ಶನ: ಪ್ರಜ್ವಲ್ ಕೆಲಸ ಮಾಡಿರುವ ವಿಚಾರಗಳನ್ನು ಜನರಿಗೆ ಮುಟ್ಟಿಸಬೇಕು. ಇಲ್ಲವಾದರೆ ನಮ್ಮ ಎದುರಾಳಿಗಳು ನಮ್ಮನ್ನು ಬಿಡುವುದಿಲ್ಲ. ರಾಜ್ಯ ಸಭೆಯಲ್ಲಿ ನನಗಿನ್ನೂ ಎರಡೂವರೆ ವರ್ಷ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ, ಸಲಹೆ ಸಹಕಾರ ನೀಡುತ್ತೇನೆ, ಈ ಜಿಲ್ಲೆಯ ಜನರ ಋಣ ತೀರಿಸಬೇಕಿದೆ ಎಂದರು.

ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ 24 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಅದಕ್ಕೆ ಅಸೂಯೆ ಪಡುತ್ತೀರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಅವರು, ನಿಮ್ಮ ಎಲ್ಲಾ ಭಾಗ್ಯಗಳಿಗೂ ಕುಮಾರಸ್ವಾಮಿ ಹಣ ಒದಗಿಸಿ ಎಂದು ಇದೇ ಸಿದ್ದರಾಮಯ್ಯ ಅಸೆಂಬ್ಲಿಯಲ್ಲಿ ಹೇಳಿದ್ದರು. ನನ್ನ ಭಾಗ್ಯಗಳಿಗೆ ಹಣ ಇಟ್ಟು ಆಮೇಲೆ ಸಾಲ ಮನ್ನಾ ಮಾಡಿ ಎಂದಿದ್ದರು ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ನಾನು ಜ್ವರ ಬಂದು ಮನೆಯಲ್ಲಿ ಮಲಗಿದ್ದಾಗ, ರಾಜಣ್ಣ ಬಂದು ಸೋಲುತ್ತೇನೆ ಪ್ರಚಾರಕ್ಕೆ ಬನ್ನಿ ಅಂದರು. ಜ್ವರ ಇದ್ದರೂ ಪ್ರಚಾರಕ್ಕೆ ಹೋಗಿ ರಾಜಣ್ಣನ ಗೆಲ್ಲಿಸಿದೆ ಎಂದು ಹೇಳಿದರು. ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ನಾನು ಸಂಸದನಾದಾಗಿನಿಂದ ಸುಮ್ಮನೆ ಕೂತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಡೆ ಓಡಾಡಿದ್ದೀನಿ. ಐದು ವರ್ಷದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೀನಿ ಎಂದರು.

Leave a Reply

Your email address will not be published. Required fields are marked *

error: Content is protected !!