ಉದಯವಾಹಿನಿ, ಮಾಲೂರು : ಮಹಾಶಿವರಾತ್ರಿ ಅಂಗವಾಗಿ ಮುಜರಾಯಿ ಇಲಾಖೆಗೆ ಸೇರಿದ ಪಟ್ಟಣ ಶಂಕರನಾರಾಯಣಸ್ವಾಮಿ ದೇಗುಲ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಶಂಕರನಾರಾಯಣಸ್ವಾಮಿ ದೇವಾಲಯದಲ್ಲೂ ಸಹ ಶಿವರಾತ್ರಿ ಅಂಗವಾಗಿ ದೇವರಿಗೆ ವಿಜೃಂಭಣೆಯಿಂದ ಪೂಜೆಗಳು ನಡೆಯಿತು. ಮೂಲದೇವರಿಗೆ ವಿವಿಧ ರೀತಿಯ ಪೂಜೆ ಸಲ್ಲಿಸಲಾಯಿತು. ಭಕ್ತಾಧಿಗಳು ಶಿವನ ನಾಮಸ್ಮರಣೆ ಮೂಲಕ ದೇವರ ದರ್ಶನ ಪಡೆದರು. ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಕ್ತಾಧಿಗಳು ಉಪವಾಸ ವ್ರತ ಕೈಗೊಂಡು ಶಿವನಾಮ ಜಪ ಮಾಡುತ್ತಾ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಶಂಕರನಾರಾಯಣಸ್ವಾಮಿ, ಕಾಡುಮಲ್ಲೇಶ್ವರ, ಟೇಕಲ್‌ನ ಪ್ರಸನ್ನ ಸೋಮೇಶ್ವರಸ್ವಾಮಿ, ಮಾಸ್ತಿಯ ಪ್ರಸಿದ್ದ ದೇಗುಲವಾದ ತೀರ್ಥಬಂಡಹಟ್ಟಿಯ ತೀರ್ಥಗಿರಿನಾಥೇಶ್ವರ, ಮಾಸ್ತಿಯ ನಂಜುಂಡೇಶ್ವರ ದೇಗುಲ, ದೊಡ್ಡಶಿವಾರ ಗ್ರಾಮದ ಶಿವಪಾರ್ವತಿ ದೇಗುಲ, ಶಿವಾರಪಟ್ಟಣದ ಸೋಮೇಶ್ವರಸ್ವಾಮಿ ಹಾಗೂ ಈಶ್ವರ ದೇಗುಲ ಸೇರಿದಂತೆ ಶಿವನ ದೇಗುಲಗಳಲ್ಲಿ ಮುಂಜಾನೆಯಿಂದಲೆ ದೇವರಿಗೆ ಭಕ್ತಾಧಿಗಳು ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.
ತಾಲೂಕಿನ ದೊಡ್ಡಶಿವಾರ ಗ್ರಾಮದ ಪುರಾತನ ದೇಗುಲವಾದ ಗಂಗಾಧರೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ ನಡೆಯಿತು. ರಾತ್ರಿ ದೇಗುಲದ ಸಮಿತಿಯ ವತಿಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಶಿವಾರಪಟ್ಟಣ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಸೋಮೇಶ್ವರಸ್ವಾಮಿ ಹಾಗೂ ಕುಂಬೇಶ್ವರಸ್ವಾಮಿ, ರಾಧಮ್ಮ ಈಶ್ವರ ದೇಗುಲದಲ್ಲೂ ಸಹ ಪೂಜೆಗಳು ನಡೆಯಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
