ಉದಯವಾಹಿನಿ, ಮೈಸೂರು: ಇಂದಿರಾ ಕ್ಯಾಂಟಿನ್ ಗಳು ಬಡವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು
ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟಿನ್ ಶಂಕು ಸ್ಥಾಪನೆ ಹಾಗೂ ಮುಖ್ಯಮಂತ್ರಿಗಳ ನಗರೋತ್ಥಾನ 4 ರಡಿ ಆಯ್ದ ವೈಯಕ್ತಿಕ ಪಾಲನುಭವಿಗಳಿಗೆ ಸಹಾಯಧನ ವಿತರಣೆ ನೆರವೇರಿಸಿ ಅವರು ಮಾತನಾಡಿದರು. ಹೊಸದಾಗಿ 9 ಇಂದಿರಾ ಕ್ಯಾಂಟಿನ್ ಗಳಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಲಾಗಿದೆ.
ಈಗಾಗಲೇ 2016 ರ ಇಸವಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳು ಆಗಿದ್ದಾಗ ಇಂದಿರಾ ಕ್ಯಾಂಟಿನ್ ಗಳನ್ನೂ ಹೊಸದಾಗಿ ಪ್ರಾರಂಭಿಸಲಾಯಿತು. 5 ರೂ ಗೆ ತಿಂಡಿ 10 ರು ಗೆ ಊಟ ನೀಡಲು ಆರಂಭಿಸಲಾಯಿತು. ಕರ್ನಾಟಕದಲ್ಲಿ 520 ಇಂದಿರಾ ಕ್ಯಾಂಟಿನ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಕಡಿಮೆ ದರದಲ್ಲಿ ಉತ್ತಮ ತಿಂಡಿ ಊಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 17 ಇಂದಿರಾ ಕ್ಯಾಂಟಿನ್ ಗಳು ಕೆಲಸ ಮಾಡುತ್ತಿದ್ದು ಇದರಲ್ಲಿ 12 ಮೈಸೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಇಂದಿರಾ ಕ್ಯಾಂಟಿನ್ ಗಳಲ್ಲಿ ಹೊಸದಾಗಿ ರಾಗಿ ಮುದ್ದೆ ಸೊಪ್ಪು ಸಾರು ನೀಡಲು ಕ್ರಮ ವಹಿಸಲಾಗಿದೆ. ನಮ್ಮ ಸರ್ಕಾರದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ಗಳ ವಿತರಣೆ ಮಾಡಲಾಗುತ್ತಿದೆ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಸಂವಿಧಾನದ ಮೂಲ ಉದ್ದೇಶವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ನಮ್ಮ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಬಡ ವರ್ಗದ ಜನತೆಗೆ ಆಹಾರ, ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಯುವನಿದಿ ಸಹಾಯಧನ ದೊರೆಯುತ್ತಿದೆ. ಇದರಿಂದ ಜನರ ಜೀವನಮಟ್ಟ ಸುಧಾರಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಮಾತನಾಡಿ ಇಂದು ನಗರದಲ್ಲಿ 9 ಇಂದಿರಾ ಕ್ಯಾಂಟಿನ್ ಗಳ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 17 ಇಂದಿರಾ ಕ್ಯಾಂಟಿನ್ ಗಳು ಕಾರ್ಯ ನಿರ್ವಹಿಸುತ್ತಿವೆ. ಊಟದ ಮೆನುವನ್ನು ಬದಲಾಯಿಸಿಕೊಂಡು ಮುದ್ದೆ ಮತ್ತು ಸೊಪ್ಪು ಸಾಂಬಾರ್ ನೀಡಲು ಟೆಂಡರ್ ನಲ್ಲಿ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!