ಉದಯವಾಹಿನಿ, ಬೆಂಗಳೂರು: ಸ್ನೇಹಿತೆಯನ್ನು ಬೀಳ್ಕೊಡಲು ನಕಲಿ ಟಿಕೆಟ್‌ನೊಂದಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಯುವಕನೊಬ್ಬನನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಪ್ರಖರ್ ಶ್ರೀವಾಸ್ತವ (೨೪ ) ಬಂಧಿತ ಆರೋಪಿಯಾಗಿದ್ದು,ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಆರೋಪಿ ಪ್ರಖರ್ ಶ್ರೀವಾಸ್ತವ ಸ್ನೇಹಿತೆ ಸಂಸ್ಕೃತಿ ದೆಹಲಿಗೆ ಹೋಗಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸ್ನೇಹಿತೆಯನ್ನು ಕಳುಹಿಸಲು ಕೊಡಲು ಪ್ರಖರ್, ಪ್ರಯಾಣದ ನಕಲಿ ಟಿಕೆಟ್ ತಯಾರಿಸಿ ವಿಮಾನ ನಿಲ್ದಾಣಕ್ಕೆ ಆರೋಪಿ ಬಂದಿದ್ದಾನೆ.
ನಕಲಿ ಟಿಕೆಟ್ ಅನ್ನು ತೋರಿಸಿ, ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದಾನೆ. ಆದರೆ ವಿಮಾನದಲ್ಲಿ ಪ್ರಯಾಣಿಸದೆ, ಸ್ನೇಹಿತೆಯನ್ನು ಕಳುಹಿಸಿ ವಾಪಸ್ ಆಗಿದ್ದಾನೆ. ಆಗ ಗೇಟ್ ನಂ. ೯ರ ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ, ನನಗೆ ತುರ್ತು ಕರೆ ಬಂದಿದೆ, ಹೀಗಾಗಿ ಮರಳಿ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಪ್ರಖರ್‌ನ ಪ್ರಯಾಣದ ಟಿಕೆಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿದಾಗ ನಕಲಿ ಎನ್ನುವುದು ಪತ್ತೆಯಾಗಿದೆ.
ಕೂಡಲೇ ಪ್ರಖರ್‌ನನ್ನು ವಿಮಾನ ನಿಲ್ದಾಣದ ಪೊಲೀಸರು ವಶಕ್ಕೆ ಪಡೆದುಕೊಂಡು, ತೀವ್ರ ವಿಚಾರಣೆ ನಡೆಸಿದಾಗ ಸ್ನೇಹಿತೆಗೆ ಬೈ ಬೈ ಹೇಳಲು
ವಿಮಾನ ಟಿಕೆಟ್ ಅನ್ನು ನಕಲಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ವಿಮಾನ ನಿಲ್ದಾಣದ ಒಳಗೆ ಅತಿಕ್ರಮಣ, ನಕಲಿ ಟಿಕೆಟ್ ಮತ್ತು ವಂಚನೆಯ ಅಡಿಯಲ್ಲಿ ಆರೋಪಿ ವಿರುದ್ಧ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ವರದಿಯಾದ ಎರಡನೇ ಪ್ರಕರಣ ಇದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಜಾರ್ಖಂಡ್ ಮೂಲದ ೨೬ ವರ್ಷದ ಹರ್‌ಪ್ರೀತ್ ಕೌರ್ ಸೈನಿ ಎಂಬ ಟೆಕ್ಕಿಯು ಟಿಕೆಟ್ ಇಲ್ಲದೆ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ್ದರು. ಕೂಡಲೆ ಅವರನ್ನು ಬಂಧಿಸಲಾಗಿತ್ತು.
