ಉದಯವಾಹಿನಿ, ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿದೆ.
ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದ ಚಂದ್ರಶೇಖರ ತಂದೆ ಸಿದ್ದಪ್ಪ ಮುಡಬೂಳ ಶಿಕ್ಷೆಗೆ ಗುರಿಯಾದ ಆರೋಪಿ. 2022ರಲ್ಲಿ ಈತ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ ಬಗ್ಗೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಸಬ್ ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಗೀತಾ ಬೇನಹಾಳ ಅವರು ಪ್ರಕರಣದ ತನಿಖೆ ನಡೆಸಿ ಪೋಕ್ಸೋ ಹಾಗೂ ಎಸ್‍ಸಿ/ಎಸ್‍ಟಿ ಪಿಎ ಕಾಯ್ದೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ-ಎಫ್‍ಟಿಎಸ್‍ಸಿ-1ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕಾನೂನು ಪ್ರಾಧಿಕಾರದ ವತಿಯಿಂದ ನೊಂದ ಬಾಲಕಿಗೆ ತೀರ್ಪಿನ ದಿನಾಂಕದಿಂದ 1 ತಿಂಗಳ ಅವಧಿಯೊಳಗೆ 7 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಹಂಪಮ್ಮ ಕಲ್ಮಠ ಅವರು ವಾದ ಮಂಡಿಸಿದ್ದರು.
