ಉದಯವಾಹಿನಿ, ಭಾಲ್ಕಿ: ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಜಾರಿ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ವರದಾನವಾಗಿವೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ಜನಸ್ಪಂದನ ಮತ್ತು ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಮತ್ತು ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿಗೆ ತರುವುದಾಗಿ ಹೇಳಲಾಗಿತ್ತು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಳೆದ ಹತ್ತು ತಿಂಗಳಿನಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಉತ್ತಮ ಆಡಳಿತ ನೀಡುತ್ತಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವುದರ ಜತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಗ್ಯಾರಂಟಿ ಯೋಜನೆ ಬಡ ಜನರಿಗೆ ವರದಾನವಾಗಿ ಪರಿಣಮಿಸಿವೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಆಗಿವೆ ಎಂದರು.
ವಿರೋಧ ಪಕ್ಷದವರೂ ಗ್ಯಾರಂಟಿ ಯೋಜನೆ ಕೇವಲ ಲೋಕಸಭಾ ಚುನಾವಣೆ ವರೆಗೂ ಮಾತ್ರ ಮುಂದುವರೆಯುತ್ತವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರ ಮುಂದಿನ ಐದು ವರ್ಷಗಳ ಕಾಲ ಐದು ಗ್ಯಾರಂಟಿಗಳನ್ನು ಮುಂದುವರೆಸಲಿದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ.
ಗ್ಯಾರಂಟಿ ಯೋಜನೆ ಅನುಷ್ಟಾನದಿಂದ ಸರಕಾರದ ಖಜಾನೆ ಲೂಟಿ, ದಿವಾಳಿ ಆಗುತ್ತದೆ ಎಂದು ವಿರೋಧಿಗಳು ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ, ಅನುದಾನದ ಕೊರತೆ ಇಲ್ಲ, ಹೀಗಾಗಿ ಗ್ಯಾರಂಟಿ ನಿಲ್ಲುವುದಿಲ್ಲ ಫಲಾನುಭವಿಗಳು ಆತಂಕ ಪಡಬಾರದು ಎಂದು ಅಭಯ ನೀಡಿದರು.
ಜಿಲ್ಲೆಯಲ್ಲಿ ಲಕ್ಷಾಂತರ ಫಲಾನುಭವಿಗಳು ಗ್ಯಾರಂಟಿ ಯೋಜನೆ ಲಾಭ. ಜಿಲ್ಲೆಯ 11.20 ಲಕ್ಷ ಫಲಾನುಭವಿಗಳು ಅನ್ನಭಾಗ್ಯ, 3.50 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ, 3.20 ಲಕ್ಷ ಫಲಾನುಭವಿಗಳು ಉಚಿತ ವಿದ್ಯುತ್, ಶಕ್ತಿ ಯೋಜನೆಯಡಿ 1 ಕೋಟಿಗೂ ಅಧಿಕ ಮಹಿಳೆಯರು ಉಚಿತ ಬಸ್ ಪ್ರಯಾಣ ಬೆಳೆಸಿದ್ದಾರೆ. ಯುವ ನಿಧಿ ಯೋಜನೆಯಡಿ ಹತ್ತಾರೂ ಸಾವಿರ ಯುವಕರು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ.
ಇದು ಕಾಂಗ್ರೆಸ್ ಸರಕಾರದ ಸಾಧನೆ ಆಗಿದೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ, ಅಮೃತರಾವ ಚಿಮಕೋಡೆ, ಡಿಸಿ ಗೋವಿಂದ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಎಸ್.ಎಲ್, ಜಿಪಂ ಸಿಇಓ ಡಾ.ಗೀರಿಶ ಬದೋಲೆ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರೆ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ತಹಸೀಲ್ದಾರ ಶ್ರೀಯಂಕಾ ಧನಶ್ರೀ, ತಾಪಂ ಇಓ ಸೂರ್ಯಕಾಂತ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
