ಉದಯವಾಹಿನಿ, ನವದೆಹಲಿ: ಶತಕೋಟಿ ಭಾರತೀಯರು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ, ವಿವಿಧ ರಾಜಕೀಯ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಿರುವ 18ನೇ ಲೋಕಸಭಾ ಚುನಾವಣಾ ಮಹಾಸಮರಕ್ಕೆ ನಾಳೆಯೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಲಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದು, ಲೋಕಸಭೆ ಕುರುಕ್ಷೇತ್ರಕ್ಕೆ ಮುಹೂರ್ತ ನಿಗದಿಯಾಗಲಿದೆ.ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಹಾಗೂ ನೂತನ ಆಯುಕ್ತರಾಗಿರುವ ಜ್ಞಾನೇಶ್‍ಕುಮಾರ್ ಮತ್ತು ಸುಖ್‍ಬೀರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯ ದಿನಾಂಕವನ್ನು ಘೋಷಿಸಲಿದ್ದಾರೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಜೊತೆಗೆ ಒರಿಸ್ಸಾ, ಆಂಧ್ರಪ್ರದೇಶ ಮತ್ತು ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆಗಳಿಗೂ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ.2019ರಲ್ಲಿ ದೇಶಾದ್ಯಂತ ಏಳು ಹಂತದ ಮತದಾನ ನಡೆದಿತ್ತು. ಈ ಬಾರಿಯೂ ಹೆಚ್ಚು ಕಡಿಮೆ ಅಷ್ಟೇ ಹಂತದ ಮತದಾನ ನಡೆಯುವ ಸಾಧ್ಯತೆ ಇದೆ. ಕಳೆದ 2019ರ ಮಾರ್ಚ್ 10ರಂದು ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದು ಮೇ 25ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡಿತ್ತು.ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಮೇ 18 ಮತ್ತು ಮೇ 23 ಸೇರಿದಂತೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 14 ಹಾಗೂ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆಗಳು, ಧಾರ್ಮಿಕ ಆಚರಣೆಗಳಿಗೆ ಅಡೆತಡೆಯಾಗದಂತೆ ಆಯೋಗ ಪರಿಶೀಲಿಸಿ ದಿನಾಂಕವನ್ನು ನಿಗದಿಪಡಿಸಲಿದೆ.ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳಿಗೆ 5 ಹಂತದ ಮತದಾನ ನಡೆಯುವ ಸಂಭವವಿದೆ. ನಕ್ಸಲ್ ಪೀಡಿತ ರಾಜ್ಯಗಳಾದ ಛತ್ತೀಸ್‍ಘಡ, ಜಾರ್ಖಂಡ್‍ನಲ್ಲೂ 5 ಹಂತ ಹಾಗೂ ಬಿಹಾರದಲ್ಲಿ 2 ಹಂತದ ಮತದಾನಕ್ಕೆ ದಿನಾಂಕವನ್ನು ಆಯೋಗ ನಿಗದಿಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ಉಪಟಳವಿರುವ ಜಮ್ಮುಕಾಶ್ಮೀರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯುವುದರಿಂದ ಆಯೋಗ 5 ಹಂತದ ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.

ಚುನಾವಣಾ ತಯಾರಿಗಳನ್ನು ಚುರುಕುಗೊಳಿಸುವ ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ತಿಳಿಯಲು ಆಯೋಗ ಕೆಲವು ತಿಂಗಳಿನಿಂದ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಕಾರಿಗಳ (ಸಿಇಒ) ಜತೆ ಸತತವಾಗಿ ಸಭೆಗಳನ್ನು ನಡೆಸಿತ್ತು. ಸಮಸ್ಯೆ ಇರುವ ಪ್ರದೇಶಗಳು, ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಸಾಗಣೆ, ತಮಗೆ ಅಗತ್ಯವಿರುವ ಭದ್ರತಾ ಪಡೆಗಳು, ಗಡಿಗಳಲ್ಲಿನ ತಪಾಸಣೆಯನ್ನು ಬಿಗಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಪಟ್ಟಿಗಳನ್ನು ಸಿಇಒಗಳು ಆಯೋಗಕ್ಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!