ಉದಯವಾಹಿನಿ, ಬೆಂಗಳೂರು: ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಪಕ್ಷದಲ್ಲಿದ್ದುಕೊಂಡೇ ಶುದ್ದೀಕರಣ ಕೆಲಸ ಮಾಡುವುದಾಗಿ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದಗೌಡ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಇದೀಗ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ಖುದ್ದು ಡಿವಿಎಸ್, ನನಗೆ ಕಾಂಗ್ರೆಸ್ ಸೇರುವಂತೆ ಆ ಪಕ್ಷದ ಪ್ರಮುಖರು ಆಹ್ವಾನ ನೀಡಿದ್ದು ನಿಜ. ಆದರೆ ನಾನು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಈ ಬಾರಿ ಟಿಕೆಟ್ ಕೈ ತಪ್ಪಿರುವುದಕ್ಕೆ ನಿಜವಾಗಿಯೂ ಬೇಸರವಾಗಿದೆ. ಟಿಕೆಟ್ ಕೈ ತಪ್ಪಿಸಿದವರು ಯಾರು ಎಂಬುದು ನನಗೂ ಗೊತ್ತು. ನಿಮಗೂ ಗೊತ್ತು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಟಿಕೆಟ್ ಕೈ ತಪ್ಪಿದಾಗ ಮನಸ್ಸಿಗೆ ಬೇಸರವಾಗಿದ್ದು ನಿಜ. ಸೀಟ್ ಹಂಚಿಕೆ ಬಗ್ಗೆ ಗೊಂದಲ ಇದ್ದಾಗ, ನಾನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬದಲಿ ಹೆಸರು ಬಂದಾಗ ಕುತೂಹಲ ಹೆಚ್ಚಾಗಿತ್ತು. ನಾನು ಚುನಾವಣೆ ಯಿಂದ ದೂರ ಸರಿದಾಗ ಎಲ್ಲರೂ ನನ್ನನ್ನು ಮನವೊಲಿಸಿದರು ಎಂದು ಹೇಳಿದರು.
ನನ್ನ ಮುಂದಿನ ನಡಿಗೆ ಕರ್ನಾಟಕದ ಬಿಜೆಪಿ ಶುದ್ಧೀಕರಣವಾಗಬೇಕು. ನನಗೆ ಟಿಕೆಟ್ ಕೈತಪ್ಪಿಸಿದವರು ಮುಂದಿನ ದಿನಗಳಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಲವರು ಮಾಜಿ ಸಚಿವರು ಪಶ್ಚಾತ್ತಾಪ ಪಡುತ್ತಾರೆ. ಸಹಿಸಿಕೊಳ್ಳುವವನಿಗೆ ತಾಳ್ಮೆ ಇದ್ದರೆ ದುಃಖ ಕೊಟ್ಟವನು ಸತ್ತಂತೆ ಎಂದು ಯಾರ ಹೆಸರನ್ನು ಹೇಳದೆ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!