ಉದಯವಾಹಿನಿ, ಬೆಂಗಳೂರು : ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿ ಸಭೆ ಅನುಮೋದನೆ ನೀಡಿರುವ 17 ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು , ಬಾಕಿ ಇದ್ದ 4 ಕ್ಷೇತ್ರಗಳಿಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ.ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಅಂಗೀಕಾರ ಪಡೆದಿರುವ 17 ಮಂದಿ ಸಂಭವನೀಯರ ಪಟ್ಟಿಯಲ್ಲಿ ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜೊತೆಯಲ್ಲಿ ಕುಟುಂಬ ರಾಜಕಾರಣಕ್ಕೂ ಮಣೆ ಹಾಕಲಾಗಿದೆ.ಲಿಂಗಾಯತ ಸಮುದಾಯದ 5, ಗೌಡ ಸಮುದಾಯಕ್ಕೆ 2, ಕುರುಬ, ಅಲ್ಪಸಂಖ್ಯಾತ, ಬಂಟ, ರೆಡ್ಡಿಸಮುದಾಯಗಳಿಗೆ ತಲಾ 1 ಸ್ಥಾನಗಳನ್ನು ನೀಡಲಾಗಿದೆ.ಎಸ್‍ಸಿ ಮೀಸಲು ಕ್ಷೇತ್ರದಲ್ಲಿ ಚಿತ್ರದುರ್ಗವನ್ನು ಎಡಗೈ ಸಮುದಾಯಕ್ಕೆ ನೀಡಲಾಗಿದೆ. ರಾಯಚೂರು ಎಸ್‍ಟಿ ಮೀಸಲು ಕ್ಷೇತ್ರಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ನಾಯಕ್‍ರನ್ನು ಕಣಕ್ಕಿಳಿಸಲಾಗುತ್ತಿದೆ. ಚಿಕ್ಕೋಡಿ ಸಾಮಾನ್ಯ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಅವರ ಹೆಸರು ಆಖೈರುಗೊಳ್ಳುವ ಮೂಲಕ ಪರಿಶಿಷ್ಟ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ.
ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಅವರನ್ನು ಲೆಕ್ಕಿಸದೆ ಸಂಯುಕ್ತ ಪಾಟೀಲ್‍ಗೆ ಮಣೆ ಹಾಕಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಸ್ಪರ್ಧೆ ಅನಿಶ್ಚಿತವಾಗಿರುವುದರಿಂದ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರು ಆಖೈರುಗೊಂಡಿದೆ. ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್‍ಗೆ ಮಣೆ ಹಾಕಲಾಗಿದೆ. ಉತ್ತರ ಕನ್ನಡ ಕ್ಷೇತ್ರಕ್ಕೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಹಾಗೂ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅಭ್ಯರ್ಥಿಯಾಗಲಿದ್ದಾರೆ. ಹಿಂದುಳಿದ ವರ್ಗಗಳಿಗೆ ಈ ಬಾರಿ ಹೆಚ್ಚಿನ ಮಣೆ ಹಾಕದೇ ಇರುವುದು ಕಂಡುಬಂದಿದೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಬೀದರ್, ದಾವಣಗೆರೆ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ.ಈಗಾಗಲೇ ಪ್ರಕಟಿಸಲಾಗಿರುವ 7 ಕ್ಷೇತ್ರಗಳ ಪೈಕಿ ಶಿವಮೊಗ್ಗ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲಾಗಿತ್ತು.ಎರಡನೇ ಹಂತದಲ್ಲಿನ ಸಂಭವನೀಯರ ಪಟ್ಟಿಯನ್ನು ಕಂಡು ಬಹಳಷ್ಟು ನಿಷ್ಟಾವಂತ ಕಾಂಗ್ರೆಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಲೋಕಸಭಾ ಚುನಾವಣೆಗಾಗಿ ಕೆಲವು ವರ್ಷಗಳಿಂದಲೂ ತಯಾರಿ ನಡೆಸಿದ್ದವರು ಕುಟುಂಬ ರಾಜಕಾರಣದ ಅಬ್ಬರದಲ್ಲಿ ಅವಕಾಶ ವಂಚಿತರಾಗಿದ್ದು, ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ.ಎರಡನೇ ಪಟ್ಟಿ ಅಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆ ಬಂಡಾಯದ ಕಿಡಿ ಹೊತ್ತಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ.
